ಕೈರೋ: ಈಜಿಪ್ಟ್ನ ಸುಯೆಜ್ ಕಾಲುವೆಯಲ್ಲಿ ಕಳೆದ ಒಂದು ವಾರದಿಂದ ಸಿಲುಕಿದ್ದ ದೈತ್ಯ ಸರಕು ಸಾಗಣೆ ಹಡಗು ‘ಎವರ್ ಗಿವನ್’ ಮುಂದೆ ಸಾಗುತ್ತಿದೆ ಎಂದು ವರದಿಯಾಗಿದೆ. ಸತತ ಆರು ದಿನಗಳ ಕಾಲ ಸುಯೆಜ್ ಕಾಲುವೆ ಮಾರ್ಗ ಬಂದ್ ಮಾಡಿದ್ದ ಬೃಹತ್ ಸರಕು ಸಾಗಣೆ ಹಡಗನ್ನು ಟಗ್ ಬೋಟ್ಗಳ ನೆರನಿಂದ ಕಾಲುವೆಯ ಮತ್ತೊಂದು ಬದಿಗೆ ಸರಿಸಲಾಗಿದೆ ಎಂದು ತಿಳಿದು ಬಂದಿದೆ.
10 ಟಗ್ ಬೋಟ್‌ಗಳೊಂದಿಗೆ ದೈತ್ಯ ಹಡಗನ್ನು ತಳ್ಳಲು ಮತ್ತು ಎಳೆಯಲು ಮತ್ತು ಹಲವಾರು ಡ್ರೆಡ್ಜರ್‌ಗಳೊಂದಿಗೆ ಮರಳನ್ನು ನಿರ್ವಾತಗೊಳಿಸಲು ತೀವ್ರವಾದ ಪ್ರಯತ್ನಗಳ ನಂತರ ಸಾಧಾರಣ ಪ್ರಗತಿಯಾಗಿದೆ ಎಂದು ಲೆಥ್ ಏಜೆನ್ಸಿಗಳು ತಿಳಿಸಿವೆ.
ಇದನ್ನೂ ಓದಿ: ಸುಯೆಜ್ ಕಾಲುವೆಯಲ್ಲಿ ಸಿಲುಕಿದ ಬೃಹತ್ ಹಡಗು: ಜಾಗತಿಕ ಶಿಪ್ಪಿಂಗ್ ವ್ಯವಸ್ಥೆಗೆ ಅಡ್ಡಿ
ಈ ಬಗ್ಗೆ ಸುಯೆಜ್ ಕಾಲುವೆ ಪ್ರಾಧಿಕಾರ ಮಾಹಿತಿ ನೀಡಿದ್ದು, ನಿನ್ನೆ ಕಾಲುವೆಯಲ್ಲಿ ತುಂಬಿದ್ದ ಹೂಳು ತೆಗೆದ ಪರಿಣಾಮ ಬೋಟ್ 2 ಇಂಚು ಪಕ್ಕಕ್ಕೆ ಕದಲಿತ್ತು. ಇದೀಗ ಟಗ್ ಬೋಟ್ ಗಳು ಮತ್ತು ಡ್ರೆಡ್ಜರ್ಗಳ ನಿರಂತರ ಕಾರ್ಯಾಚರಣೆಯ ಫಲವಾಗಿ ಬೋಟ್ ಅನ್ನು ಮಾರ್ಗದಿಂದ ತೆರವುಗೊಳಿಸುವಲ್ಲಿ ಯಶಸ್ಸು ಸಾಧಿಸಲಾಗಿದೆ. ಕಾರ್ಯಾಚರಣೆ ವೇಳೆ ಹಡಗಿನ ಸುತ್ತಲೂ 59 ಅಡಿಗಳಷ್ಟು ಆಳದವರೆಗೂ 27,000 ಘನ ಮೀಟರ್ ಮರಳನ್ನು ಅಗೆದು ತೆಗೆದು ಹಾಕಲಾಗಿದೆ. ಪರಿಣಾಮ ಬೋಟ್ ಅನ್ನು 30 ಡಿಗ್ರಿ ಪಕ್ಕಕ್ಕೆ ತಿರುಗಿಸಲು ನೆರವಾಯಿತು ಎಂದು ವರದಿಗಳು ತಿಳಿಸಿವೆ.
ಈ ಮೂಲಕ ಎರಡೂ ದಡಕ್ಕೆ ತಾಗಿಕೊಂಡು ನಿಂತಿದ್ದ ಎವರ್ ಗಿವನ್ ಹಡಗನ್ನು ಕದಲಿಸಿ ಅದರ ಮಾರ್ಗದಲ್ಲಿ ಸಾಗುವಂತೆ ಮಾಡಿ, ಇತರ ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಎವರ್ ಗಿವನ್ ಹಡಗು ಮುಂದಕ್ಕೆ ಸಾಗಿದ್ದು, ಸುಯೆಜ್ ಕಾಲುವೆಯಲ್ಲಿ ಅಡ್ಡಲಾಗಿ ಸಿಲುಕಿಕೊಂಡಿದ್ದ ಬೃಹತ್ ಕಂಟೇನರ್ ಹಡಗು ಸೋಮವಾರ ಮತ್ತೆ ಸಂಚಾರ ಆರಂಭಿಸಿದೆ. ಇದರಿಂದ ಜಾಗತಿಕ ವಾಣಿಜ್ಯ ವಹಿವಾಟುಗಳ ಪ್ರಮುಖ ಹಾದಿ ತಿಳಿಯಾಗುವ ಭರವಸೆ ಮೂಡಿದೆ.
ಇದನ್ನೂ ಓದಿ: ಸುಯೆಜ್ ಕಾಲುವೆಯಲ್ಲಿ ಸಿಲುಕಿದ ದೈತ್ಯ ಹಡಗು : ವ್ಯಾಪಾರ, ವಹಿವಾಟಿನ ಮೇಲೆ ತೀವ್ರ ಪರಿಣಾಮ
ಹಡಗು ಸಿಲುಕಿದ್ದು ಹೇಗೆ?: ಎವರ್ ಗಿವನ್ ಹಡಗು ಸುಯೆಜ್ ಕಾಲುವೆ ದಾಟುವ ಸಂದರ್ಭದಲ್ಲಿ ಭಾರೀ ಬಿರುಗಾಳಿ ಬೀಸಿದೆ. ಈ ವೇಳೆ ಗಾಳಿಯ ರಭಸದಿಂದ ದಿಕ್ಕು ತಪ್ಪಿದ ಈ ದೈತ್ಯ ಹಡಗು, ಕಾಲುವೆಯ ಬಳಿ ಅಡ್ಡವಾಗಿ ಸಿಲುಕಿದೆ. ಪರಿಣಾಮವಾಗಿ ಈ ಹಡಗಿನ ಹಿಂದೆ ಕಾಲುವೆ ದಾಟಲು ಕಾಯುತ್ತಿದ್ದ ಇತರ ಸರಕು ಹಡಗುಗಳು ಮುಂದಕ್ಕೆ ಸಾಗಲಾಗದೇ ನಿಂತಲ್ಲೇ ನಿಂತಿವೆ.
ಜಪಾನ್ ಒಡೆತನದ ತೈವಾನ್‌ನ ಎವರ್ ಗ್ರೀನ್ ಕಂಪನಿ ನಿರ್ವಹಿಸುವ ಎಂವಿ ಎವರ್ ಗಿವನ್ ಎಂಬ ದೈತ್ಯ ಸರಕು ಹಡಗು, ಕಳೆದ ವಾರ ಸುಯೆಜ್ ಕಾಲುವೆಯ ರಹದಾರಿ ದಾಟುವಾಗ ಮಾರ್ಗ ಮಧ್ಯೆ ಸಿಲುಕಿಕೊಂಡಿತ್ತು. ಇದರಿಂದಾಗಿ ಸುಯೆಜ್ ಕಾಲುವೆಯಲ್ಲಿ ಭಾರಿ ಸಂಖ್ಯೆಯಲ್ಲಿ ಸರಕು ಹಡಗುಗಳು ಸಾಲುಗಟ್ಟಿ ನಿಂತಿದ್ದವು. ಅಲ್ಲದೇ ಕಾಲುವೆ ಬಂದ್ ಆಗಿದ್ದರಿಂದ ಜಾಗತಿಕ ವ್ಯಾಪಾರದ ಮೇಲೆ ದುಷ್ಪರಿಣಾಮ ಬೀರಿತ್ತು.