ಚೆಂಗ್ಡು(ಚೀನಾ): ಎರಡು ಪ್ರಬಲ ಜಾಗತಿಕ ಶಕ್ತಿಗಳಾದ ಚೀನಾ ಹಾಗೂ ಅಮೆರಿಕ ನಡುವೆ ಉದ್ವಿಗ್ನ ಸನ್ನಿವೇಶ ಹೆಚ್ಚುತ್ತಿದ್ದು, ಹೋಸ್ಟನ್‌ನಲ್ಲಿರುವ ತನ್ನ ದೂತವಾಸ ಕಚೇರಿಯನ್ನು ಸ್ಥಗಿತಗೊಳಿಸಿದ್ದಕ್ಕಾಗಿ ಚೀನಾ ಕೂಡಾ ಪ್ರತೀಕಾರ ತೀರಿಸಿಕೊಂಡಿದೆ.
ನೈಋತ್ಯ ಚೀನಾದ ಚೆಂಗ್ಡು ನಗರದಲ್ಲಿರುವ ಅಮೆರಿಕದ ದೂತವಾಸ ಕಚೇರಿಯನ್ನು ಚೀನಾದ ಅಧಿಕಾರಿಗಳು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ದೂತವಾಸ ಕಚೇರಿಯನ್ನು ಸ್ಥಗಿತಗೊಳಿಸುವ ಚೀನಾ ಸರ್ಕಾರದ ಆದೇಶದ ಮೇರೆಗೆ, ಅಲ್ಲಿನ ಅಧಿಕಾರಿಗಳು ಕಚೇರಿಯ ಆವರಣವನ್ನು ಖಾಲಿ ಮಾಡಿಸಿದ್ದಾರೆ. ಅಲ್ಲದೆ ಕಚೇರಿಯಲ್ಲಿದ್ದ ಅಮೆರಿಕ ಧ್ವಜವನ್ನು ಸಹ ಕೆಳಗಿಳಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಸಿಚುವಾನ್ ಪ್ರಾಂತ್ಯದ ರಾಜಧಾನಿ ಚೆಂಗ್ಡುನಲ್ಲಿರುವ ಯುಎಸ್ ಕಚೇರಿಯಲ್ಲಿರುವ ಧ್ವಜವನ್ನು ಸೋಮವಾರ ಬೆಳಗ್ಗೆ 6:18ಕ್ಕೆ ಕೆಳಕ್ಕೆ ಇಳಿಸಲಾಗಿದೆ ಎಂದು 'ಸಿಸಿಟಿವಿ' ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತಿಳಿಸಿದೆ.
ಹೋಸ್ಟನ್‌ನಲ್ಲಿರುವ ಚೀನಾ ದೂತವಾಸ ಕಚೇರಿಯನ್ನು ಮುಚ್ಚುವಂತೆ ಅಮೆರಿಕ ಆದೇಶ ನೀಡಿತ್ತು. ಇದಕ್ಕೆ ಪ್ರತೀಕಾರವಾಗಿ ಚೀನಾ ಕೂಡಾ ಅಮೆರಿಕ ದೂತವಾಸ ಕಚೇರಿಯನ್ನು ಮುಚ್ಚಲು ಆದೇಶಿಸಿದೆ. ವ್ಯಾಪಾರ, ತಂತ್ರಜ್ಞಾನ, ಭದ್ರತೆ ಮತ್ತು ಮಾನವ ಹಕ್ಕುಗಳು ಸೇರಿದಂತೆ ಹಲವಾರು ವಿಷಯಗಳ ಕುರಿತು ಉಭಯ ರಾಷ್ಟ್ರಗಳ ನಡುವೆ ಇತ್ತೀಚೆಗೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.