ಬೀಜಿಂಗ್: ಚೀನಾದ ಹೆನಾನ್ ಪ್ರಾಂತ್ಯದ ಯುಝೌ ನಗರದಲ್ಲಿ ಸೋಮವಾರ ಕೇವಲ ಮೂರೇ ಮೂರು ಕೋವಿಡ್ ಸೋಂಕಿತರು ಪತ್ತೆಯಾಗಿದ್ದಕ್ಕೆ ಇಡೀ ನಗರದ ಮೇಲೆ ಲಾಕ್‌ಡೌನ್ ಹೇರಲಾಗಿದೆ. ಅಲ್ಲದೇ, ಈ ಮೂವರು ಸೋಂಕಿತರಿಗೆ ರೋಗ ಲಕ್ಷಣಗಳೇ ಇಲ್ಲ. ಆದರೂ ಅಧಿಕಾರಿಗಳು ಕಠಿಣ ನಿರ್ಬಂಧ ಜಾರಿಗೊಳಿಸಿದ್ದಾರೆ.
ಯುಝೌ ನಗರದಲ್ಲಿ 1.2 ಮಿಲಿಯನ್ ಜನರು ವಾಸವಾಗಿದ್ದು, ಈಗ ಅವರೆಲ್ಲರೂ ತಮ್ಮ ಮನೆಯಲ್ಲಿಯೇ ಬಂಧಿಯಾಗಬೇಕಿದೆ. ಈಗಾಗಲೇ ಚೀನಾದ ಅತಿದೊಡ್ಡ ನಗರಗಳಲ್ಲಿ ಒಂದಾದ ಕ್ಸಿಯಾನ್ನಲ್ಲಿ ಲಾಕ್‌ಡೌನ್ ಘೋಷಿಸಲಾಗಿದ್ದು, ಅಲ್ಲಿನ ಎಲ್ಲಾ ನಿವಾಸಿಗಳಿಗೆ ಅಂದರೆ 13 ಮಿಲಿಯನ್ ಜನರಿಗೆ ಮನೆಯಿಂದ ಹೊರಗೆ ಬರದಂತೆ ಸೂಚಿಸಿದ್ದಾರೆ.
ಮುಂದಿನ ತಿಂಗಳು ಮುಂಬರುವ ಚಳಿಗಾಲದ ಒಲಿಂಪಿಕ್ಸ್‌ಗೆ ಮುಂಚಿತವಾಗಿ ಬೀಜಿಂಗ್ ತನ್ನ ಶೂನ್ಯ-ಕೋವಿಡ್ ತಂತ್ರವನ್ನು ಹಿಡಿದಿಟ್ಟುಕೊಂಡಿದೆ. ಹೀಗಾಗಿ, ಅಲ್ಲೇ ಕೊರೊನಾ ಹೊಸ ಪ್ರಕರಣಗಳು ಕಂಡು ಬಂದರೂ ಸ್ಥಳೀಯ ಅಧಿಕಾರಿಗಳು ನಿರ್ಬಂಧಗಳನ್ನು ಹೇರುತ್ತಿದ್ದಾರೆ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಚೀನಾದಲ್ಲಿ ಭೂಕುಸಿತ- 5 ಮಂದಿ ಸಾವು, 9 ಮಂದಿ ಕಣ್ಮರೆ.. 720 ಸಿಬ್ಬಂದಿಯಿಂದ ಶೋಧಕಾರ್ಯ
ಈ ಎರಡೂ ನಗರಗಳಲ್ಲಿ ತುರ್ತು ವಾಹನಗಳನ್ನು ಹೊರತುಪಡಿಸಿ ಸಾರ್ವಜನಿಕ ಹಾಗೂ ಖಾಸಗಿ ಸಾರಿಗೆಯನ್ನು ಸ್ಥಗಿತಗೊಳಿಸಲಾಗಿದೆ. ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಅಗತ್ಯ ವಸ್ತು ಪೂರೈಕೆಗೆ ಮಾತ್ರ ಅವಕಾಶ ನೀಡಲಾಗಿದೆ.
ಕಳೆದ 24 ಗಂಟೆಗಳಲ್ಲಿ ಚೀನಾದಲ್ಲಿ 175 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಪ್ರಪಂಚದ ಬೇರೆಡೆಗೆ ಹೋಲಿಸಿದರೆ ಚೀನಾದಲ್ಲಿ ಪತ್ತೆಯಾಗುತ್ತಿರುವ ಕೇಸ್ಗಳ ಸಂಖ್ಯೆ ಕಡಿಮೆಯಾದರೂ ಕೂಡ 2020ರ ಮಾರ್ಚ್ ಬಳಿಕ ಈ ದೇಶದಲ್ಲಿ ಕಳೆದ ಕೆಲ ವಾರಗಳಿಂದ ವರದಿಯಾಗುತ್ತಿರುವ ಸೋಂಕಿತರ ಸಂಖ್ಯೆ ಗರಿಷ್ಠ ಮಟ್ಟವನ್ನು ತಲುಪಿದೆ.