ಬೀಜಿಂಗ್(ಚೀನಾ): ಆಗ್ನೇಯ ಏಷ್ಯಾ, ಪಶ್ಚಿಮ ಪೆಸಿಫಿಕ್, ದಕ್ಷಿಣ ಚೀನಾ ಸಮುದ್ರದಲ್ಲಿ ನಾಲ್ಕು ಯುದ್ಧ ನೌಕೆಗಳ ಕಾರ್ಯಪಡೆಯನ್ನು ನಿಯೋಜಿಸುವುದಾಗಿ ಭಾರತ ಘೋಷಿಸಿದ ಕೆಲವೇ ದಿನಗಳಲ್ಲಿ ಚೀನಾ ಅತ್ಯಂತ ಸೂಕ್ಷ್ಮ ನಿರ್ಧಾರವನ್ನು ಹೊರಹಾಕಿದ್ದು, ಈ ಮೂಲಕ ದಕ್ಷಿಣ ಚೀನಾ ಸಮುದ್ರದ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಶುಕ್ರವಾರದಿಂದ ಐದು ದಿನಗಳ ಕಾಲ ದಕ್ಷಿಣ ಚೀನಾ ಸಮುದ್ರದಲ್ಲಿ ಮಿಲಿಟರಿ ಸಮರಾಭ್ಯಾಸ ನಡೆಸುವುದಾಗಿ ಚೀನಾ ಘೋಷಿಸಿದೆ. ಭಾರತ, ಅಮೆರಿಕ ಸೇರಿದಂತೆ ಇತರ ರಾಷ್ಟ್ರಗಳು ದೊಡ್ಡ ಮಟ್ಟದ ಮಿಲಿಟರಿ ಅಭ್ಯಾಸಗಳನ್ನು ನಡೆಸುವ ಮೂಲಕ ಚೀನಾ ಮೇಲೆ ಒತ್ತಡ ಸೃಷ್ಟಿಸಿದ ಕಾರಣದಿಂದ ಚೀನಾ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ದಕ್ಷಿಣ ಚೀನಾ ಸಮುದ್ರದ ಭಾಗದಲ್ಲಿ ಚೀನಾ ಕೇವಲ ಮಿಲಿಟರಿ ಸಮರಾಭ್ಯಾಸ ನಡೆಸುವುದು ಮಾತ್ರವಲ್ಲದೇ ಈ ಸಮುದ್ರದಲ್ಲಿ ವಿಶಾಲವಾದ ನೌಕಾ ನಿರ್ಬಂಧ ವಲಯವನ್ನು ಸ್ಥಾಪಿಸುವ ಗುರಿಯನ್ನು ಚೀನಾ ಹೊಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈಗಾಗಲೇ ಭಾರತೀಯ ಯುದ್ಧ ನೌಕೆಗಳು ಮಲಬಾರ್ ವ್ಯಾಯಾಮದ ಮುಂದಿನ ಆವೃತ್ತಿಯ ಕ್ವಾಡ್ (ಭಾರತ, ಜಪಾನ್, ಅಮೆರಿಕ, ಆಸ್ಟ್ರೇಲಿಯಾ) ಸಮರಾಭ್ಯಾಸದಲ್ಲಿ ಭಾಗವಹಿಸಲು ಸಜ್ಜಾಗಿವೆ. ಅದರ ಜೊತೆಗೆ ವಿಯೆಟ್ನಾಂ, ಫಿಲಿಪೈನ್ಸ್, ಸಿಂಗಾಪುರ್, ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾ ದೇಶಗಳೊಂದಿಗೆ ದ್ವಿಪಕ್ಷೀಯ ಸಮರಾಭ್ಯಾಸ ಕೂಡಾ ನಡೆಸಲು ಚಿಂತನೆ ನಡೆಸಿದೆ.
ಚೀನಾ ನಡೆಸುತ್ತಿರುವ ಮಿಲಿಟರಿ ವ್ಯಾಯಾಮವು ಇತ್ತೀಚಿನ ಪ್ರಚೋದನೆಗಳಿಗೆ ಪ್ರತಿಕ್ರಿಯೆಯಾಗಿದೆ ಎಂದು ಚೀನಾ ಸರ್ಕಾರದ ಮಾಧ್ಯಮಸಂಸ್ಥೆಯಾದ ಗ್ಲೋಬಲ್ ಟೈಮ್ಸ್ ಹೇಳಿದ್ದು, 'ಚೀನಾದ ಹಿತಾಸಕ್ತಿಗೆ ವಿರುದ್ಧವಾಗಿರುವ ಹಸಿದಿರುವ ತೋಳಗಳ ಬೇಟೆಗೆ ರೈಫಲ್ಗಳು ಸಿದ್ಧವಾಗಿವೆ' ಎಂದು ಚೀನಾದ ಮಿಲಿಟರಿ ಸಮರಾಭ್ಯಾಸವನ್ನು ಬಣ್ಣಿಸಿದೆ.
ಶುಕ್ರವಾರದಿಂದ ಮಂಗಳವಾರದವರೆಗೆ ಚೀನಾ ದಕ್ಷಿಣ ಚೀನಾ ಸಮುದ್ರದಲ್ಲಿ ಮಿಲಿಟರಿ ತರಬೇತಿಯನ್ನು ನಡೆಸಲಿದ್ದು, ಬೇರೆ ಹಡಗುಗಳು ಈ ವಲಯಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ಚೀನಾದ ಸಾಗರ ಸುರಕ್ಷತಾ ಆಡಳಿತವು ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.
ಕಳೆದ ಕೆಲವು ತಿಂಗಳುಗಳಿಂದ ದಕ್ಷಿಣ ಚೀನಾ ಸಮುದ್ರ ಮತ್ತು ಪೂರ್ವ ಚೀನಾ ಸಮುದ್ರ ಎರಡರಲ್ಲೂ ಚೀನಾ ತನ್ನ ಸಮುದ್ರ ಚಟುವಟಿಕೆಗಳನ್ನು ಹೆಚ್ಚಿಸುತ್ತಿದ್ದು, ಹಿಂದಿನ ಬಾರಿ ಇದೇ ರೀತಿಯ ಸಮರಾಭ್ಯಾಸದಲ್ಲಿ ಹಡಗು-ವಿರೋಧಿ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪ್ರಯೋಗವನ್ನು ಚೀನಾ ನಡೆಸಿತ್ತು ಎಂದು ತೈಪೆ ಮೂಲದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಇದನ್ನೂ ಓದಿ: 15 ವರ್ಷ ವಯಸ್ಸು ಮೇಲ್ಪಟ್ಟ ಪತ್ನಿಯೊಂದಿಗಿನ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಅಲಹಾಬಾದ್ ಹೈಕೋರ್ಟ್