ಬೀಜಿಂಗ್ : ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಕಾಬೂಲ್ನಲ್ಲಿ ಚೀನಾ ತನ್ನ ಮೊದಲ ರಾಜತಾಂತ್ರಿಕ ಸಂಸ್ಥೆ ಸ್ಥಾಪಿಸಿದೆ. ಎರಡೂ ಕಡೆಯವರು ಉತ್ತಮ ಸಂವಹನ ನಡೆಸುತ್ತಿದ್ದೇವೆ ಎಂದು ಚೀನಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಚೀನಾ ಮತ್ತು ಅಫ್ಘನ್ ತಾಲಿಬಾನ್‌ಗಳು ಅಡೆತಡೆಯಿಲ್ಲದ ಮತ್ತು ಪರಿಣಾಮಕಾರಿ ಸಂವಹನ ಮತ್ತು ಸಮಾಲೋಚನೆ ನಡೆಸುತ್ತಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದಾರೆ.
ಪ್ರಮುಖ ಸಮಸ್ಯೆಗಳನ್ನು ಚರ್ಚಿಸಲು ಕಾಬೂಲ್ ಸಹಜವಾಗಿಯೇ ನಮಗೆ ಒಂದು ಪ್ರಮುಖ ವೇದಿಕೆಯಾಗಿದೆ. ಅಫ್ಘನ್ ಜನರ ಸ್ವತಂತ್ರ ನಿರ್ಧಾರವನ್ನು ಚೀನಾ ಗೌರವಿಸುತ್ತದೆ. ಅಫ್ಘಾನಿಸ್ತಾನದೊಂದಿಗೆ ಸ್ನೇಹ ಮತ್ತು ಸಹಕಾರದ ಸಂಬಂಧಗಳನ್ನು ಅಭಿವೃದ್ಧಿಪಡಿಸಲು ಚೀನಾ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಅಗಸ್ಟ್ 15ರಂದು ತಾಲಿಬಾನ್, ಕಾಬೂಲ್ ಮೇಲೆ ಹಿಡಿತ ಸಾಧಿಸಿದ ನಂತರ ಕಾಬೂಲ್ನಲ್ಲಿ ಪಾಕಿಸ್ತಾನ, ಚೀನಾ ತನ್ನ ರಾಯಭಾರ ಕಚೇರಿಗಳನ್ನು ತೆರೆದಿವೆ. ಭಾರತ, ಅಮೆರಿಕ ಮತ್ತು ಇತರೆ ದೇಶಗಳು ತಮ್ಮ ರಾಜತಾಂತ್ರಿಕ ಕಚೇರಿಯನ್ನು ಮುಚ್ಚಿವೆ.
ತಾಲಿಬಾನ್ನ ಕಾಬೂಲ್ ಆಕ್ರಮಣದಿಂದಾಗಿ ಲಕ್ಷಾಂತರ ಜನರು ದೇಶ ತೊರೆದರು. ಈ ಬೆನ್ನಲ್ಲೇ ಕಾಬೂಲ್ನಲ್ಲಿ ಮುಲ್ಲಾ ಅಬ್ದುಲ್ ಘನಿ ಬರದಾರ್ ನೇತೃತ್ವದ ತಾಲಿಬಾನ್ ನಿಯೋಗ ಅಘ್ಘನ್ನಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿತು.
ಇದನ್ನೂ ಓದಿ: ಆಫ್ಘನ್ ತಾಲಿಬಾನ್ ವಶ: ಯಾವುದೇ ಅಪಾಯ ಎದುರಿಸಲು ಭಾರತ ಸರ್ವಸನ್ನದ್ಧ - ಬಿಪಿನ್ ರಾವತ್
ಕೆಲ ತಿಂಗಳ ಹಿಂದೆ ತಾಲಿಬಾನ್ ಕಂಡರೆ ನಡುಗುತ್ತಿದ್ದ ಚೀನಾ, ಉಗ್ರಪಡೆಯ ನಾಯಕರೊಂದಿಗೆ ಮಾತುಕತೆ ನಡೆಸಿತು. ಬಳಿಕ ಬರದಾರ್ ಚೀನಾಗೆ ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲ ಎಂದು ಭರವಸೆ ನೀಡಿದ ಮೇಲೆ, ಚೀನಾ ಅಫ್ಘನ್ನಲ್ಲಿ ಹೂಡಿಕೆಗೆ ಮುಂದಾಯಿತು.