ಬೀಜಿಂಗ್/ವೆನ್ಚಾಂಗ್: ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಮರಳಲು ಚೀನಾ ಮಂಗಳವಾರ ತನ್ನ ಮೊದಲ ಮಾನವರಹಿತ ಬಾಹ್ಯಾಕಾಶ ಯಾನವನ್ನು ಯಶಸ್ವಿಯಾಗಿ ಪ್ರಾರಂಭಿಸಿತು. ಭೂಮಿಯ ಹೊರಗಿನ ದೇಹದಿಂದ ವಸ್ತುಗಳನ್ನು ಹಿಂಪಡೆಯುವ ದೇಶದ ಮೊದಲ ಪ್ರಯತ್ನ ಇದಾಗಿದೆ. ಚೀನಾ ತನ್ನ ಮಹತ್ವಾಕಾಂಕ್ಷೆಯ ಚಾಂಗ್'ಇ-5 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಚೀನಾದ ದಕ್ಷಿಣ ದ್ವೀಪ ಪ್ರಾಂತ್ಯದ ಹೈನಾನ್‌ನ ವೆನ್ ಚಾಂಗ್ ಬಾಹ್ಯಾಕಾಶ ಕೇಂದ್ರದಿಂದ, ಈ ನೌಕೆಯನ್ನು ಹೊತ್ತು ಲಾಂಗ್ ಮಾರ್ಚ್-5 ರಾಕೆಟ್ ಬೆಳಗ್ಗೆ 4.30 ಕ್ಕೆ (ಬೀಜಿಂಗ್ ಸಮಯ) ಯಶಸ್ವಿ ಉಡಾವಣೆಯಾಗಿದೆ ಎಂದು ಚೀನಾ ಸರ್ಕಾರಿ ಮಾಧ್ಯಮ ತಿಳಿಸಿದೆ.
ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಸಂಗ್ರಹಿಸಲಿರುವ ಚಾಂಗ್'ಇ-5 ಬಾಹ್ಯಾಕಾಶ ನೌಕೆ, ಮಾದರಿಗಳನ್ನು ಹೊತ್ತು ಭೂಮಿಗೆ ಮರಳಲಿದೆ. ಚಂದ್ರನ ಉಗಮ, ರಚನೆ ಮತ್ತು ಜ್ವಾಲಾಮುಖಿ ಚಟುವಟಿಕೆಯ ಬಗ್ಗೆ ಪ್ರಮುಖ ಮಾಹಿತಿಯನ್ನುಈ ನೌಕೆ ಸಂಗ್ರಹಿಸಲಿದೆ ಎಂದು ಹೇಳಲಾಗಿದೆ.
ಚಾಂಗ್ -5 ಚೀನಾದ ಏರೋಸ್ಪೇಸ್ ಇತಿಹಾಸದಲ್ಲಿ ಅತ್ಯಂತ ಸಂಕೀರ್ಣ ಮತ್ತು ಸವಾಲಿನ ಕಾರ್ಯಾಚರಣೆಗಳಲ್ಲಿ ಒಂದಾಗಿದೆ, ಜೊತೆಗೆ 40 ವರ್ಷಗಳಿಗಿಂತಲೂ ಹೆಚ್ಚು ಸಮಯದ ವಿಶ್ವದ ಮೊದಲ ಚಂದ್ರ-ಮಾದರಿ ಮಿಷನ್ ಆಗಿದೆ.
ಈ ಹಿಂದೆ ಅಮೆರಿಕ ಗಗನಯಾತ್ರಿಗಳನ್ನು ಚಂದ್ರನಿಗೆ ಕಳುಹಿಸಿ, ಅಲ್ಲಿನ ಮಾದರಿಗಳನ್ನು ಭೂಮಿಗೆ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಅಂದಿನ ಸೋವಿಯತ್ ಯೂನಿಯನ್(ರಷ್ಯಾ) ಮಾನವರಹಿತ ಚಂದ್ರನ ಮಾದರಿ ಕಾರ್ಯಾಚರಣೆಗಳಲ್ಲಿ, ಬಾಹ್ಯಾಕಾಶ ನೌಕೆ ಚಂದ್ರನಿಂದ ಹೊರಟು ನೇರವಾಗಿ ಭೂಮಿಗೆ ಮರಳಿತು.
ಈ ಕಾರ್ಯಾಚರಣೆಯು ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ಚೀನಾದ ಭವಿಷ್ಯದ ಮಾನವಸಹಿತ ಚಂದ್ರಯಾನ ಮತ್ತು ಆಳವಾದ ಬಾಹ್ಯಾಕಾಶ ಪರಿಶೋಧನೆಗೆ ಪ್ರಮುಖ ಅಡಿಪಾಯವನ್ನು ಹಾಕುತ್ತದೆ ಎಂದು ಚೀನಾದ ಚಂದ್ರ ಪರಿಶೋಧನೆ ಮತ್ತು ಬಾಹ್ಯಾಕಾಶ ಕಾರ್ಯಕ್ರಮ ಕೇಂದ್ರದ ಉಪ ನಿರ್ದೇಶಕ ಪೀ ಹೇಳಿದರು.