ಬೀಜಿಂಗ್: ದಿನೇ ದಿನೆ ಹೆಚ್ಚಾಗುತ್ತಿರುವ ಕೋವಿಡ್-19 ಪ್ರಕರಣಗಳ ನಿಯಂತ್ರಣಕ್ಕಾಗಿ ನೆರವಾಗಲು ಚೀನಾ ಈಗಾಗಲೇ ಪಾಕಿಸ್ತಾನಕ್ಕೆ ಸಾಕಷ್ಟು ವೈದ್ಯಕೀಯ ಸಿಬ್ಬಂದಿ ಹಾಗೂ ಚಿಕಿತ್ಸಾ ಸಲಕರಣೆಗಳನ್ನು ರವಾನೆ ಮಾಡಿದೆ. ಈಗ ತನ್ನ ಆಪ್ತಮಿತ್ರನಿಗೆ ಸಹಾಯ ಮಾಡಲು ಚೀನಾ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಪಾಕಿಸ್ತಾನದಲ್ಲಿ ಕೊರೊನಾ ಪೀಡಿತರ ಚಿಕಿತ್ಸೆಗಾಗಿ ತಾತ್ಕಾಲಿಕ ಆಸ್ಪತ್ರೆಗಳನ್ನು (makeshift hospital) ನಿರ್ಮಿಸಿ ಕೊಡಲು ಮುಂದಾಗಿದೆ.
"ಪಾಕಿಸ್ತಾನದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಅವರ ಎಲ್ಲ ಕಷ್ಟಗಳಿಗೂ ನಾವು ಸ್ಪಂದಿಸಲಿದ್ದೇವೆ. ಟೆಸ್ಟಿಂಗ್ ಕಿಟ್ಗಳು, ರಕ್ಷಣಾ ಉಡುಪುಗಳು, ವೆಂಟಿಲೇಟರ್ಗಳನ್ನು ಈಗಾಗಲೇ ಪಾಕಿಸ್ತಾನಕ್ಕೆ ಕಳುಹಿಸಿದ್ದೇವೆ. ಕಳೆದ ವಾರವೇ ಪಾಕಿಸ್ತಾನದಲ್ಲಿ ತಾತ್ಕಾಲಿಕ ಆಸ್ಪತ್ರೆಯ ಕಟ್ಟಡ ಕಾಮಗಾರಿಯನ್ನು ನಾವು ಆರಂಭಿಸಿದ್ದೇವೆ." ಎಂದು ಚೀನಾ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರೆ ಹುವಾ ಚುನಿಯಿಂಗ್ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
"ನಮ್ಮ ವೈದ್ಯರ ತಂಡವೊಂದು ಈಗಾಗಲೇ ಇಸ್ಲಾಮಾಬಾದ್ನಲ್ಲಿ ಕೆಲಸ ಮಾಡುತ್ತಿದೆ. ಈಗ ವಿಡಿಯೋ ಕಾನ್ಫರೆನ್ಸ್ ಮೂಲಕ ಮತ್ತಷ್ಟು ವೈದ್ಯಕೀಯ ಸೇವೆಯನ್ನು ಅಲ್ಲಿಗೆ ತಲುಪಿಸಲಿದ್ದೇವೆ." ಎಂದು ಚುನಿಯಿಂಗ್ ಮಾಹಿತಿ ನೀಡಿದರು.
ಚೀನಾ ಈಗಾಗಲೇ 8 ಜನ ವೈದ್ಯರ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದ ರಸ್ತೆ ಮಾರ್ಗದ ಮೂಲಕ ಸಹ ಸಾಕಷ್ಟು ಚಿಕಿತ್ಸಾ ಸಾಮಗ್ರಿಗಳನ್ನು ಪಾಕಿಸ್ತಾನದೊಳಕ್ಕೆ ಚೀನಾ ಸಾಗಿಸಿದೆ. 5 ವೆಂಟಿಲೇಟರ್ಗಳು, 2000 ರಕ್ಷಣಾ ಕವಚಗಳು, 20,000 ಮೆಡಿಕಲ್ ಮಾಸ್ಕ್, 24,000 ನ್ಯೂಕ್ಲಿಯಿಕ್ ಆ್ಯಸಿಡ್ ಟೆಸ್ಟಿಂಗ್ ಕಿಟ್ಗಳು ತುಂಬಿದ್ದ ಲಾರಿ ಖುಂಜ್ರಾಬ್ ಪಾಸ್ ಮೂಲಕ ಗಿಲ್ಗಿಟ್- ಬಾಲ್ಟಿಸ್ತಾನ್ ತಲುಪಿದೆ.
ಕೊರೊನಾ ವೈರಸ್ ಸಮಸ್ಯೆ ಎಷ್ಟೇ ತೀವ್ರತೆ ಪಡೆದುಕೊಂಡರೂ ವುಹಾನ್ನಲ್ಲಿ ಸಿಲುಕಿದ್ದ ತನ್ನ 1000 ನಾಗರಿಕರನ್ನು ಪಾಕ್ ಹಿಂದಕ್ಕೆ ಕರೆಸಿಕೊಳ್ಳಲೇ ಇಲ್ಲ ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.