ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್‌ನ ಶಾರ್-ಇ-ನಾವ್ ಪ್ರದೇಶದಲ್ಲಿ ಬ್ಯೂಟಿ ಸಲೂನ್‌ಗಳ ಮುಂಭಾಗ ಹಾಕಲಾಗಿರುವ ಮಹಿಳೆಯರ ಚಿತ್ರಗಳನ್ನು ಉಗ್ರರು ವಿರೂಪಗೊಳಿಸುತ್ತಿದ್ದಾರೆ.
ತಾಲಿಬಾನ್‌ಗಳ ಇಂಥ ನಡೆಗಳಿಗೆ ಆಕ್ರೋಶ ಮತ್ತು ಆಕ್ಷೇಪ ವ್ಯಕ್ತಪಡಿಸಿರುವ ಬ್ರಿಟನ್, ನಿಮ್ಮ ಭರವಸೆ ಹುಟ್ಟಿಸುವ ಮಾತುಗಳ ಬದಲಿಗೆ ಕ್ರಮಗಳಿಂದ ನಿಮ್ಮನ್ನು ನಿರ್ಣಯಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಬ್ಯೂಟಿ ಸಲೂನ್‌ಗಳ ಮುಂದೆ ಅಂಟಿಸಲಾಗಿದ್ದ ಮಹಿಳೆಯರ ಚಿತ್ರಗಳಿಗೆ ಈ ಉಗ್ರರು ಕಪ್ಪು ಮಸಿ ಸ್ಪ್ರೇ ಮಾಡುತ್ತಿರುವ ವಿಡಿಯೋ ಸೆರೆಹಿಡಿಯಲಾಗಿದೆ. ಈ ಚಿತ್ರಗಳ ಮುಂದೆ ಉಗ್ರನೊಬ್ಬ ಗನ್ ಹಿಡಿದು ನಿಂತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ
ಇತ್ತೀಚಿನ ದಿನಗಳಲ್ಲಿ ಅಫ್ಘಾನ್ ತೊರೆದಿದ್ದ 2,000ಕ್ಕೂ ಹೆಚ್ಚು ಮಂದಿಗೆ ಬ್ರಿಟನ್ ಸರ್ಕಾರ ನೆರವು ನೀಡಿದೆ. ಪ್ರಧಾನಿ ಬೋರಿಸ್ ಜಾನ್ಸನ್ ಮಾತನಾಡುತ್ತಾ, ಅಫ್ಘನ್ ಬಿಕ್ಕಟ್ಟು ನಿಭಾಯಿಸುವುದರ ಬಗ್ಗೆ ತಮ್ಮ ಸರ್ಕಾರ ನಿರ್ಧಾರಗಳನ್ನು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ, ಅಮೆರಿಕ ಬೆಂಬಲವಿಲ್ಲದೆ ಅಫ್ಘಾನಿಸ್ತಾನದಲ್ಲಿ ಬ್ರಿಟನ್ ಉಳಿಯಲು ಸಾಧ್ಯ ಇರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ 1 ಕೋಟಿ 40 ಲಕ್ಷ ಜನ ಹಸಿವಿನಿಂದ ಬಳಲುತ್ತಿದ್ದಾರೆ: ವಿಶ್ವಸಂಸ್ಥೆ ಕಳವಳ
ಯುಎಸ್ ಅಧ್ಯಕ್ಷ ಜೋ ಬೈಡೆನ್ ಸೇರಿದಂತೆ ಇತರ ಪಾಶ್ಚಿಮಾತ್ಯ ನಾಯಕರೊಂದಿಗೆ ಈ ವಾರ ನಡೆದ ಮಾತುಕತೆಯ ನಂತರ ಪ್ರತಿಕ್ರಿಯಿಸಿರುವ ಅವರು, ಯಾವುದೇ ದೇಶವು ಕಾಬೂಲ್‌ನಲ್ಲಿ ಹೊಸ ಆಡಳಿತವನ್ನು ಗುರುತಿಸುವುದು ಆತುರದ ನಿರ್ಧಾರವಾಗುತ್ತದೆ ಎಂದಿದ್ದಾರೆ.
ಭಯೋತ್ಪಾದನೆ, ಅಪರಾಧ ಮತ್ತು ಮಾದಕದ್ರವ್ಯ ಪೂರೈಕೆಯ ವಿರುದ್ಧ ಕ್ರಮಗಳು ಮತ್ತು ಮಾನವೀಯತೆ ಮತ್ತು ಹೆಣ್ಣುಮಕ್ಕಳ ಶಿಕ್ಷಣ ಪಡೆಯುವ ಹಕ್ಕುಗಳ ಆಧಾರದ ಮೇಲೆ ಈ ಆಡಳಿತದ ಆಯ್ಕೆಗಳನ್ನು ನಾವು ನಿರ್ಣಯಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.