ಇಸ್ಲಾಮಾಬಾದ್: ಪಾಕಿಸ್ತಾನದ ಮತ್ತೋರ್ವ ವ್ಯಕ್ತಿಯಲ್ಲಿ ಮಾರಣಾಂತಿಕ ಕೊರೊನಾ ಸೋಂಕು ಪತ್ತೆಯಾಗಿದ್ದು, ಇದರಿಂದಾಗಿ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರಾಚಿಯ 50 ವರ್ಷದ ವ್ಯಕ್ತಿಯನ್ನು ಭಾನುವಾರ ಪರೀಕ್ಷೆಗೆ ಒಳಪಡಿದಾಗ ಕೊರೊನಾ ಪಾಸಿಟಿವ್ ಬಂದಿದೆ. ಇತ್ತೀಚೆಗೆ ಇದೇ ಪ್ರದೇಶದ ಮೊದಲ ಕೊರೊನಾ ಪೀಡಿತ ವ್ಯಕ್ತಿ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳಿಸಲಾಗಿದೆ. ಕೊರೊನಾ ಭಾದಿತರು ಪ್ರಯಾಣಿಸಿದ ಸ್ಥಳಗಳ ಬಗ್ಗೆ ವೈದ್ಯರು ಈಗಾಗಲೇ ಮಾಹಿತಿ ಕಲೆಹಾಕಿದ್ದಾರೆ ಎಂದು ಸಿಂಧ್ ಪ್ರಾಂತ್ಯದ ಆರೋಗ್ಯ ಸಚಿವರ ಮಾಧ್ಯಮ ಸಂಯೋಜಕ ಮೀರನ್ ಯೂಸೂಫ್ ಮಾಹಿತಿ ನೀಡಿದ್ದಾರೆ.
ಕರಾಚಿಯಲ್ಲಿ ನಡೆದ ಕೊರೊನಾ ಮುಂಜಾಗ್ರತಾ ಸಭೆಯಲ್ಲಿ ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಷಾ ಮಾತನಾಡಿ, ಇದುವರೆಗೆ ಸಿಂಧ್ ಪ್ರಾಂತ್ಯದಲ್ಲಿ ಒಟ್ಟು 107 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರಲ್ಲಿ 103 ಮಂದಿಯಲ್ಲಿ ನೆಗೆಟಿವ್ ಫಲಿತಾಂಶ ಬಂದಿದ್ದು, ಉಳಿದ ನಾಲ್ಕು ಮಂದಿಗೆ ಪಾಸಿಟಿವ್ ಬಂದಿದೆ. ಅವರೆಲ್ಲರೂ ಕರಾಚಿಯ ನಿವಾಸಿಗಳು ಎಂದು ತಿಳಿಸಿದ್ದಾರೆ.
ಇದುವರೆಗೆ ಕೊರೊನಾ ತಪಾಸಣೆ ನಡೆಸಿದವರನ್ನು ಹೊರತುಪಡಿಸಿ ಒಟ್ಟು 265 ಜನರನ್ನು ಅವರ ಮನೆಗಳಲ್ಲೇ ನಿಗಾ ಇರಿಸಲಾಗಿದೆ. ಜೊತೆಗೆ ಸಿಂಧ್ ರಾಜ್ಯ ಸರ್ಕಾರ ಇರಾನ್ನಿಂದ ಹಿಂದಿರುಗಿದ ಪ್ರಸ್ತುತ ತಪ್ತಾನ್ ಗಡಿಯಲ್ಲಿರುವ 300 ಯಾತ್ರಾರ್ಥಿಗಳನ್ನು ತಪಾಸಣೆಗೆ ಒಳಪಡಿಸಲು ತಯಾರಿ ನಡೆಸಿದೆ. ಈಗಾಗಲೇ ನಿರ್ಧರಿಸಿರುವಂತೆ ರಾಜ್ಯದಲ್ಲಿ ಕೊರೊನಾ ಭೀತಿಯಿಂದ ಮುಚ್ಚಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮಾರ್ಚ್ 16ರಂದು ತೆರೆಯುವುದಾಗಿ ಸಿಂಧ್ ಶಿಕ್ಷಣ ಸಚಿವ ಸೈಯ್ಯದ್ ಘನಿ ಹೇಳಿದ್ದಾರೆ.