ಕಾಬೂಲ್ (ಅಫ್ಘಾನಿಸ್ತಾನ): ಅಮೆರಿಕದ ಮೈಕ್ರೋ ಬ್ಲಾಗಿಂಗ್ ಮತ್ತು ಸಾಮಾಜಿಕ ಜಾಲತಾಣ ಟ್ವಿಟರ್, ಆಫ್ಘನ್ ಸರ್ಕಾರದ ವಿವಿಧ ಸಚಿವಾಲಯಗಳ ಖಾತೆಗಳಿಂದ ಪರಿಶೀಲನಾ ನೀಲಿ ಬ್ಯಾಡ್ಜ್ ತೆಗೆದುಹಾಕಿದೆ. ಈ ಕುರಿತು ಅಲ್ಲಿನ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ವಿದೇಶಾಂಗ ಸಚಿವಾಲಯ, ರಕ್ಷಣಾ ಸಚಿವಾಲಯ, ಆಂತರಿಕ ಸಚಿವಾಲಯ, ಪ್ರೆಸಿಡೆನ್ಷಿಯಲ್ ಪ್ಯಾಲೇಸ್ (Presidential Palace) ಮತ್ತು ರಾಷ್ಟ್ರೀಯ ಸಂಗ್ರಹಣಾ ಪ್ರಾಧಿಕಾರದ ಖಾತೆಗಳಿಂದ ಟ್ವಿಟರ್, ನೀಲಿ ಬ್ಯಾಡ್ಜ್ ಅನ್ನು ತೆಗೆದುಹಾಕಿದೆ.
ಟ್ವಿಟರ್ನ ಪ್ರಕಟಣೆಯ ಪ್ರಕಾರ, ಘನಿ ಆಡಳಿತದ ಪತನದ ನಂತರ ಈ ಟ್ವಿಟರ್ ಖಾತೆಯಲ್ಲಿ ಯಾವುದೇ ಪೋಸ್ಟ್ ಮಾಡಲಾಗಿಲ್ಲ. ಮಾಜಿ ಅಧ್ಯಕ್ಷ ಅಶ್ರಫ್ ಘನಿ, ಹಮೀದ್ ಕರ್ಜೈ, ಅಬ್ದುಲ್ಲಾ ಅಬ್ದುಲ್ಲಾ ಅವರ ಖಾತೆಗಳಲ್ಲಿ ಇದೇ ರೀತಿಯ ಬ್ಯಾಡ್ಜ್‌ಗಳಿವೆ. ಆದರೆ, ಉಳಿದ ಸಚಿವರ ಖಾತೆಗಳಿಂದ ಪರಿಶೀಲನಾ ಬ್ಯಾಡ್ಜ್ ತೆಗೆದು ಹಾಕಲಾಗಿದೆ. ಇದರ ಜೊತೆಗೆ, ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಅವರ ಖಾತೆಯಿಂದ ನೀಲಿ ಬ್ಯಾಡ್ಜ್ ಅನ್ನು ತೆಗೆದುಹಾಕಲಾಗಿದೆ. ಆದರೆ, ಇದು ಎರಡನೇ ಉಪಾಧ್ಯಕ್ಷ ಸರ್ವರ್ ದಾನೇಶ್ ಅವರ ಖಾತೆಯಲ್ಲಿ ಅಸ್ತಿತ್ವದಲ್ಲಿತ್ತು.
ಇದನ್ನೂ ಓದಿ: ಮುಂದುವರಿದ ತಾಲಿಬಾನ್ ವಿಕೃತಿ: ಕ್ರೇನ್ನಲ್ಲಿ ಮೃತದೇಹ ನೇತುಹಾಕಿದ ಉಗ್ರರು
ಆಗಸ್ಟ್ 15 ರಂದು ತಾಲಿಬಾನ್, ಆಫ್ಘನ್ ಮೇಲೆ ಹಿಡಿತ ಸಾಧಿಸಿದ ನಂತರ ಅಶ್ರಫ್ ಘನಿ ಚುನಾಯಿತ ಸರ್ಕಾರ ಪತನಗೊಂಡಿತು. ನಂತರ ಅಲ್ಲಿನ ಬಹುತೇಕ ಜನರು ತಾಲಿಬಾನಿಗಳಿಗೆ ಹೆದರಿ ದೇಶವನ್ನು ತೊರೆದರು.