ಬೀಜಿಂಗ್ : ಚೀನಾ ಗಣಿಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು 9 ಜನರ ಶವ ಪತ್ತೆಯಾಗಿದ್ದು, ಮೃತರ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ.
ಶಾಂಡೊಂಗ್ ಪ್ರಾಂತ್ಯದ ಚಿನ್ನದ ಗಣಿಯಲ್ಲಿ ಕಳೆದ 2 ವಾರಗಳ ಹಿಂದೆ ಸಂಭವಿಸಿದ್ದ ಅವಘಡದಲ್ಲಿ 22 ಮಂದಿ ಸಿಲುಕಿದ್ದರು. ಈ ಪೈಕಿ ಹನ್ನೊಂದು ಜನರನ್ನು ರಕ್ಷಿಸಲಾಗಿದೆ. ಕಾಣೆಯಾಗಿರುವ ಮತ್ತೊಬ್ಬನಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಯಂಟೈ ನಗರದ ಮೇಯರ್ ಚೆನ್ ಫೀ ತಿಳಿಸಿದ್ದಾರೆ. ಸತತ 14 ದಿನಗಳ ಕಾರ್ಯಾಚರಣೆ ಬಳಿಕ ಬದುಕುಳಿದಿದ್ದವರನ್ನು ಕರೆತರಲಾಗಿದೆ. ಕಾಣೆಯಾಗಿರುವ ವ್ಯಕ್ತಿಯನ್ನು ಪತ್ತೆ ಹಚ್ಚುವವರೆಗೂ ಶೋಧ ಕಾರ್ಯ ನಿಲ್ಲಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಮೃತರಿಗೆ ಸಂತಾಪ ಸೂಚಿಸಿದರು. ಈ ದುರ್ಘಟನೆಯಿಂದ ಮನಸ್ಸಿಗೆ ತೀವ್ರ ಆಘಾತವಾಗಿದೆ. ಘಟನೆಯನ್ನು ತಡವಾಗಿ ತಿಳಿಸಿದ್ದಕ್ಕೆ ಗಣಿ ವ್ಯವಸ್ಥಾಪಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಚೀನಾದಲ್ಲಿ ಇಂಥ ಗಣಿ ದುರ್ಘಟನೆಗಳು ಹೊಸದೇನಲ್ಲ. ವರ್ಷಕ್ಕೆ ಸುಮಾರು ಐದು ಸಾವಿರ ಗಣಿ ಕಾರ್ಮಿಕರು ಈ ರೀತಿಯ ಅವಘಡಗಳಿಂದ ಮೃತಪಡುತ್ತಾರೆ ಎನ್ನಲಾಗಿದೆ.