ಪೇಶಾವರ: ಪಾಕಿಸ್ತಾನದ ಪೇಶಾವರದ ದಿರ್ ಕಾಲೋನಿಯಲ್ಲಿರುವ ಜಾಮಿಯಾ ಜುಬೈರಿಯಾ ಮದರಸಾದಲ್ಲಿ ಇಂದು ನಡೆದ ಬಾಂಬ್ ಸ್ಫೋಟದಲ್ಲಿ 7 ಮಕ್ಕಳು ಮೃತಪಟ್ಟಿದ್ದು, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿರುವ ರಕ್ಷಣಾ ತಂಡಗಳು, ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗಾಯಗೊಂಡವರಲ್ಲಿ ಅನೇಕರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.
ಮದರಸಾದಲ್ಲಿ ಧರ್ಮಗುರು ಉಪನ್ಯಾಸ ನೀಡುತ್ತಿರುವ ಸಂದರ್ಭದಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ. ಯಾರೋ ಪ್ಲಾಸ್ಟಿಕ್ ಬ್ಯಾಗ್ವೊಂದನ್ನು ಮದರಸಾದೊಳಗೆ ಇಟ್ಟು ಹೋಗಿದ್ದು, ಕೆಲವೇ ನಿಮಿಷಗಳಲ್ಲಿ ಅದರಲ್ಲಿದ್ದ ಬಾಂಬ್ ಸ್ಫೋಟಿಸಿದೆ ಎಂಬುದಾಗಿ ಪ್ರಾಥಮಿಕ ತನಿಖೆ ಮೂಲಕ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿ ವಾಕರ್ ಅಜೀಮ್ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.