ಕಾಬೂಲ್ (ಅಫ್ಘಾನಿಸ್ತಾನ): ಅಮೆರಿಕ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುತ್ತಿದ್ದಂತೆ ಕಳೆದ 24 ಗಂಟೆಯೊಳಗೆ ಅಫ್ಘಾನಿಸ್ತಾನದ ಐದು ಪ್ರಾಂತ್ಯಗಳಲ್ಲಿ ನಡೆದ ಹಿಂಸಾತ್ಮಕ ದಾಳಿಯಲ್ಲಿ ಕನಿಷ್ಠ 20 ಜನ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಪರ್ವಾನ್ ಪ್ರಾಂತ್ಯದ ವಿಶ್ವವಿದ್ಯಾಲಯವೊಂದರ ಉಪನ್ಯಾಸಕರು ಮತ್ತು ನೌಕರರನ್ನು ಕರೆದೊಯ್ಯುವ ಬಸ್ ಅನ್ನು ಗುರಿಯಾಗಿಸಿಕೊಂಡು ಶನಿವಾರ ಐಇಡಿ ಸ್ಫೋಟ ನಡೆಸಿದ್ದಾರೆ. ಪರಿಣಾಮ ಉಪನ್ಯಾಸಕ ಮೈವಾಂಡ್ ಫಾರೂಕ್ ನಿಜ್ರಾಬಿ ಸೇರಿದಂತೆ ಮೂವರು ಸಹೋದ್ಯೋಗಿಗಳು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೂ 17 ಜನರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ.
ದೈನಂದಿನ ಹಿಂಸಾಚಾರವು ನಮ್ಮ ಯುವಕರು, ಧಾರ್ಮಿಕ ವಿದ್ವಾಂಸರು ಮತ್ತು ಸೈನಿಕರನ್ನು ಮೇಲೆ ನಡೆಯುತ್ತಿದೆ. ಇದು ಮುಂದುವರಿದರೆ ನಾವು ಅಪಾಯಕಾರಿ ಬಿಕ್ಕಟ್ಟಿಗೆ ಸಿಲುಕಲಿದ್ದೇವೆ ಎಂದು ಮೊಯಿನ್ ಮಿರ್ಜಾಡಾ ಎಂಬವರು ಕಳವಳ ವ್ಯಕ್ತಪಡಿಸಿದ್ದಾರೆ.
ನಂಗರ್ಹಾರ್ ಪ್ರಾಂತ್ಯದ ಶಿರ್ಜಾದ್ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ ಈಶಾನ್ಯ ಪ್ರಾಂತ್ಯದ ಕಪಿಸಾದಲ್ಲಿ ಮನೆಯೊಂದರ ಗಾರೆ ಶೆಲ್ ದಾಳಿಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು 15 ಮಂದಿ ಗಾಯಗೊಂಡಿದ್ದಾರೆ. ಈ ಮನೆಯಲ್ಲಿ ಮದುವೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ತಾಲಿಬಾನ್ ಭಯೋತ್ಪಾದಕರು ಈ ಶೆಲ್ ದಾಳಿ ಮಾಡಿದ್ದಾರೆ ಎಂದು ಕಪಿಸಾ ಪೊಲೀಸರು ಹೇಳಿದ್ದಾರೆ. ಆದ್ರೆ ಭಯೋತ್ಪಾದಕ ಗುಂಪು ಈ ಆರೋಪವನ್ನು ತಳ್ಳಿ ಹಾಕಿದೆ ಎಂದು ಸುದ್ದಿ ಸಂಸ್ಥೆಯೊಂದು ತಿಳಿಸಿದೆ. ಇದಲ್ಲದೆ ಫರಾಹ್ನಲ್ಲಿ ವಿಶ್ವವಿದ್ಯಾನಿಲಯದ ಉಪನ್ಯಾಸಕರು ಮತ್ತು ಕಾಬೂಲ್ನಲ್ಲಿ ಸರ್ಕಾರಿ ನೌಕರ ಮತ್ತು ಅವರ ಚಾಲಕನನ್ನು ಕೊಲ್ಲಲಾಗಿದೆ. ದೇಶದಲ್ಲಿ 24 ಗಂಟೆಗಳೊಳಗೆ ಹಲವಾರು ಭಾಗಗಳಲ್ಲಿ ದಾಳಿ ನಡೆದಿದೆ. ಅಧಿಕಾರಿಗಳ ಪ್ರಕಾರ ಹೆಲ್ಮಂಡ್, ಹೆರಾತ್, ಬಡ್ಗಿಸ್ ಮತ್ತು ಪಕ್ತಿಯಾ ಪ್ರಾಂತ್ಯಗಳಲ್ಲಿ ನಡೆದ ದಾಳಿಯಲ್ಲಿ 20 ಜನ ಪೈಕಿ 12 ಭದ್ರತಾ ಪಡೆ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಳೆದ ತಿಂಗಳಲ್ಲಿ ತಾಲಿಬಾನ್ ದಾಳಿಯಲ್ಲಿ 248 ನಾಗರಿಕರು ಸಾವನ್ನಪ್ಪಿದ್ದು, 527 ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳ ಸಚಿವಾಲಯ ಹೇಳಿದೆ. ಆದರೆ, ತಾಲಿಬಾನ್ ಈ ಹೇಳಿಕೆ ತಿರಸ್ಕರಿಸಿದೆ.