ಪೊವೆಲ್( ಅಮೆರಿಕ): ಕೃತಕ ಗರ್ಭಧಾರಣೆಯ ಮೂಲಕ ಎರಡು ಚಿರತೆ ಮರಿಗಳಿಗೆ ಪಶು ತಜ್ಞರು ಜನ್ಮ ನೀಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಬಾಡಿಗೆ ತಾಯಿಯ ಮೂಲಕ ಜನಿಸಿದ ಚಿರತೆ ಮರಿಗಳು ಇವಾಗಿವೆ ಎಂದು ಓಹಿಯೋ ಮೃಗಾಲಯದ ಅಧಿಕಾರಿಗಳು ಪ್ರಕಟಿಸಿದ್ದಾರೆ.
ಕೊಲಂಬಸ್ ಮೃಗಾಲಯದಲ್ಲಿರುವ 3 ವರ್ಷದ ಇಜ್ಜಿ ಎಂಬ ಚಿರತೆಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮರಿ ಜನಿಸಿವೆ ಎಂದು ಮೃಗಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕ್ಯಾಮೆರಾದ ಮೂಲಕ ಚಿರತೆ ಮರಿಗಳ ಜನನ ಪ್ರಕ್ರಿಯೆಯ ಕಣ್ಣಿಡಲಾಗಿತ್ತು.
ಮರಿಗಳ ಜೈವಿಕ ತಾಯಿಯಾಗಿರುವ 6 ವರ್ಷದ ಚಿರತೆ ಕಿಬಿಬಿ, ಇದುವರೆಗೂ ಮರಿಗಳಿಗೆ ಜನ್ಮ ನೀಡಿಲ್ಲ. ಇದೀಗ ಕಿಕಿಬಿಗೆ ಬಹಳ ವಯಸ್ಸಾಗಿದ್ದು, ನೈಸರ್ಗಿಕ ಗರ್ಭಧಾರಣೆಯೂ ಸಾಧ್ಯವಿಲ್ಲ. ಹೀಗಾಗಿ ಕೃತಕ ಗರ್ಭಧಾರಣೆ ಮೂಲಕ ಎರಡು ಚಿರತೆಗಳಿಗೆ ಜನ್ಮ ನೀಡಲಾಗಿದೆ.
ಈ ರೀತಿಯ ಕೃತಕ ಗರ್ಭಧಾರಣಾ ವ್ಯವಸ್ಥೆಯು ಭವಿಷ್ಯದಲ್ಲಿ ಚಿರತೆಗಳ ಜನಸಂಖ್ಯೆಯನ್ನು ನಿರ್ವಹಿಸಲು ಉಪಯೋಗವಾಗಲಿದೆ ಎಂದು ಮೃಗಾಲಯದ ಉಪಾಧ್ಯಕ್ಷ ಡಾ. ರ್ಯಾಂಡಿ ಜಂಗೆ ಹೇಳಿದ್ದಾರೆ. ಈ ಹಿಂದೆ ಮೂರು ಬಾರಿ ಇದೇ ವಿಧಾನದ ಮೂಲಕ ಗರ್ಭಧಾರಣೆಗೆ ಪ್ರಯತ್ನಿಸಲಾಗಿತ್ತು. ಆದರೆ ಅದು ಇದುವರೆಗೂ ಸಾಧ್ಯವಾಗಿರಲಿಲ್ಲ. ಇಷ್ಟಾದರೂ ಪ್ರಯತ್ನ ಬಿಡದ ತಜ್ಞರು, ಈ ಪ್ರಯೋಗದಲ್ಲಿ ಇದೇ ಮೊದಲ ಬಾರಿಗೆ ಯಶಸ್ವಿಯಾಗಿದ್ದಾರೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.