ವಾಷಿಂಗ್ಟನ್: ಜಾಗತಿಕ ಕೇಂದ್ರೀಯ ಬ್ಯಾಂಕ್ಗಳ ಸಹಕಾರ, ಅಮೆರಿಕ ಹಾಗೂ ಚೀನಾ ನಡುವಿನ ವಾಣಿಜ್ಯ ಸಮರದ ತಾರ್ಕಿಕ ಅಂತ್ಯದ ಬಳಿಕ ಕುಸಿತದ ಹಾದಿಯಲ್ಲಿರುವ ವಿಶ್ವದ ಆರ್ಥಿಕತೆ ಪುನರುಜ್ಜೀವನಗೊಳ್ಳಲಿದೆ ಎಂದು ಜಿ - 20 ಮುಖ್ಯಸ್ಥರು ಅಂದಾಜಿಸಿದ್ದಾರೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ ಹಾಗೂ ವಿಶ್ವಬ್ಯಾಂಕ್ ನೇತೃತ್ವದಲ್ಲಿ ನಡೆಯುತ್ತಿರುವ ಋತುಮಾನ ಪೂರ್ವ ಸಭೆಯಲ್ಲಿ ಜಾಗತಿಕ ನಾಯಕರು ಸಮಾಲೋಚನೆ ನಡೆಸಿದರು. ಈ ವೇಳೆ 2019ರ ಜಾಗತಿಕ ಬೆಳವಣಿಗೆ ದರವನ್ನು ಶೇ 3.6ರಿಂದ ಶೇ 3.3ಕ್ಕೆ ಇಳಿಕೆ ಮಾಡಿದ್ದಾರೆ. ಹಠಾತ್ ಕುಸಿತದಿಂದ ವಿಶ್ವದ ಆರ್ಥಿಕ ವೃದ್ಧಿಗೆ ಹಿನ್ನಡೆಯಾಗಿದೆ. ಆದರೆ, 2019ರ ದ್ವಿತೀಯಾರ್ಧದಲ್ಲಿ ಮತ್ತೆ ಹಳೆಯ ಲಯಕ್ಕೆ ಮರಳಲಿದೆ. ಇದಕ್ಕೆ ಕೇಂದ್ರೀಯ ಬ್ಯಾಂಕ್ಗಳ ಬಡ್ಡಿದರ ಸಹ ಉತ್ತೇಜನ ನೀಡಲಿದೆ ಎಂದಿದ್ದಾರೆ.
ಚೀನಾ ಮತ್ತು ಅಮೆರಿಕದ ನಡುವೆ ಉದ್ಭವಿಸಿರುವ ವಾಣಿಜ್ಯ ಸಮರ, ನಮ್ಮ ಆರ್ಥಿಕ ದೃಷ್ಟಿಕೋನಗಳನ್ನು ಮಬ್ಬುಗೊಳಿಸುತ್ತಿದೆ. ಇದೊಂದು ಬೆದರಿಕೆ ತಂತ್ರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
'ನಾವು, ಹೆಚ್ಚುತ್ತಿರುವ ವ್ಯಾಪಾರ ಉದ್ವಿಗ್ನತೆಯ ಬಗ್ಗೆ ಹಿಂದೆಂದಿಗಿಂತಲೂ ತುಸು ಜಾಗರೂಕರಾಗಿರಬೇಕು' ಎಂದು ಜಪಾನ್ ಹಣಕಾಸು ಸಚಿವ ಟಾರೊ ಅಸ್ಸೋ ತಿಳಿಸಿದ್ದಾರೆ. ಜಿ-20 ಸಮೂಹದಲ್ಲಿ ಜಪಾನ್ ಕೂಡ ಪ್ರಮುಖ ಸ್ಥಾನ ಪಡೆದಿದೆ.
ಕಳೆದ ವರ್ಷದ ಅಂತ್ಯ ಹಾಗೂ ಈ ವರ್ಷದ ಆರಂಭದಲ್ಲಿ ಚಂಚಲವಾದ ವ್ಯಾಪಾರ ಉದ್ವಿಗ್ನತೆ, ಪ್ರಕ್ಷುಬ್ಧವಾದ ಹಣಕಾಸು ಮಾರುಕಟ್ಟೆ ಮತ್ತು ಹೆಚ್ಚುತ್ತಿರುವ ಬಡ್ಡಿದರಗಳ ಕಾರಣದಿಂದ ಜಾಗತಿಕ ಆರ್ಥಿಕ ಬೆಳವಣಿಗೆ ಕುಸಿತವಾಗಿತ್ತು ಎಂದು ಜಿ-20 ವಿಶ್ಲೇಷಿಸಿದೆ.
ಐಎಂಎಫ್ ಕಳೆದ ವರ್ಷ ಅಂದಾಜಿಸಿದ್ದ 2019ರ ಜಾಗತಿಕ ಬೆಳವಣಿಗೆಯನ್ನು ಶೇ 3.6ರಿಂದ ಶೇ 3.3ಕ್ಕೆ ತಗ್ಗಿಸಿದೆ. ಇದು 2009ರ ಆರ್ಥಿಕ ಹಿಂಜರಿತದ ಬಳಿಕ ನಿಧಾನಗತಿಯಲ್ಲಿ ಸಾಗುತ್ತಿತ್ತು. ಆದರೆ, 2020ರ ಬೆಳವಣಿಗೆ ಶೇ 3.6ಕ್ಕೆ ಹಿಂದಿರುಗಲಿದೆ ಎಂಬ ಮುನ್ಸೂಚನೆ ನೀಡಿದೆ.
ಅಮೆರಿಕ- ಚೀನಾದ ವ್ಯಾಪಾರ ಸಂಘರ್ಷದ ಬಗ್ಗೆ ಜಗತ್ತು ಚಿಂತಿಸುತ್ತಿದೆ. ವಿಶ್ವದ ಎರಡು ಅತಿದೊಡ್ಡ ಆರ್ಥಿಕ ರಾಷ್ಟ್ರಗಳು 350 ಬಿಲಿಯನ್ ಡಾಲರ್ ಮೌಲ್ಯದ ಪರಸ್ಪರ ಸರಕುಗಳ ಮೇಲೆ ಸುಂಕ ವಿಧಿಸಿಕೊಂಡಿವೆ. ಸೈಬರ್ ಕಳ್ಳತನ ಮತ್ತು ವ್ಯಾಪಾರ ರಹಸ್ಯಗಳನ್ನು ಕೈಗೆತ್ತಿಕೊಳ್ಳಲು ವಿದೇಶಿ ಸಂಸ್ಥೆಗಳ ಮೇಲೆ ಚೀನಾ ಒತ್ತಡ ತರುತ್ತಿದೆ ಎಂದು ಅಮೆರಿಕ ಆರೋಪಿಸಿದೆ. ಈ ಎಲ್ಲ ವಾದಗಳನ್ನು ಬದಿಗಿಟ್ಟು ವ್ಯಾಪಾರ ಸಮರ ಅಂತ್ಯಗೊಳಿಸುವತ್ತ ಎರಡೂ ರಾಷ್ಟ್ರಗಳು ಮುಂದಾಗಬೇಕು ಎಂದು ಕಿವಿಮಾತು ಹೇಳಿದ್ದಾರೆ.