ವಾಷಿಂಗ್ಟನ್: ಶ್ವೇತಭವನ ಜಾರಿಗೆ ತರಲು ಉದ್ದೇಶಿಸಿರುವ 1.85 ಟ್ರಿಲಿಯನ್ ಡಾಲರ್ ಮೌಲ್ಯದ ದೇಶೀಯ ನೀತಿಯ ಪ್ಯಾಕೇಜ್ಗೆ ಈ ವಾರ ಅಮೆರಿಕ ಸಂಸತ್ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ಅಧ್ಯಕ್ಷ ಜೋ ಬೈಡನ್(President Joe Biden) ಅವರ ಉನ್ನತ ಆರ್ಥಿಕ ಸಲಹೆಗಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಮೆರಿಕದಲ್ಲಿ ಇದೀಗ ಹಣದುಬ್ಬರ ಹೆಚ್ಚಾಗಿದೆ. ಮತ್ತು ಇದು ಗ್ರಾಹಕರ ಜೇಬ್ಗೆ ಕತ್ತರಿ ಹಾಕುತ್ತಿದೆ ಮತ್ತು ಆರ್ಥಿಕತೆ ಮೇಲೂ ಪರಿಣಾಮ ಬೀರುತ್ತಿದೆ ಎಂದು ರಾಷ್ಟ್ರೀಯ ಆರ್ಥಿಕ ಮಂಡಳಿಯ ನಿರ್ದೇಶಕ ಬ್ರಿಯಾನ್ ಡೀಸ್ ತಿಳಿಸಿದ್ದಾರೆ.
ಈ ಮುಂಬರುವ ವಾರದಲ್ಲಿ ಸದನವು ಬೈಡನ್ ಜಾರಿಗೆ ತರಲು ಉದ್ದೇಶಿಸಿರುವ ವಿಶೇಷ ಆರ್ಥಿಕ ಪ್ಯಾಕೇಜ್ಗೆ ಅಸ್ತು ಎನ್ನುವ ವಿಶ್ವಾಸ ಇದೆ ಎಂದಿದ್ದಾರೆ. ಸೆನೆಟ್‌ನಲ್ಲಿ ಈ ಕ್ರಮವು ದೊಡ್ಡ ಸವಾಲುಗಳನ್ನು ಎದುರಿಸುತ್ತಿರುವ ಬೆನ್ನಲ್ಲೇ ಡೆಮೋಕ್ರಾಟ್ (Democrats) ಮಾತ್ರ - ಬೆಂಬಲಿತ ಮಸೂದೆಯ ಅನುಮೋದನೆಯತ್ತ ತನ್ನ ಗಮನ ಹರಿಸಿದೆ.
ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಕಳೆದ ವರ್ಷಕ್ಕಿಂತ 6.2 ಪ್ರತಿಶತದಷ್ಟು ಈ ಬಾರಿ ಗಗನಕ್ಕೇರಿವೆ. ಇದು 1990 ರಿಂದ ಅತಿದೊಡ್ಡ ಜಿಗಿತವಾಗಿದೆ. ಕೊರೊನಾದ ದೀರ್ಘಕಾಲೀನ ಪರಿಣಾಮಗಳಿಂದ ಮುಂದಿನ ವರ್ಷದವರೆಗೆ ಬೆಲೆಗಳು ಸಾಮಾನ್ಯ ಮಟ್ಟಕ್ಕೆ ಸಂಪೂರ್ಣವಾಗಿ ಹಿಂತಿರುಗುವುದಿಲ್ಲ ಎಂದು ಡೀಸ್ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಜೋ ಬೈಡನ್ ದೇಶಿಯ ನೀತಿಯ ಮೂಲಕ ಹಣದುಬ್ಬರ ನಿಯಂತ್ರಿಸಲು ವಿಶೇಷ ಪ್ಯಾಕೇಜ್ ನೀಡಲು ಮುಂದಾಗಿದ್ದಾರೆ. ಇದು ಹಣದುಬ್ಬರ ನಿಯಂತ್ರಣಕ್ಕೆ ಸಹಕಾರಿ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಸೂದೆಯು ಸೆನೆಟ್‌ನಲ್ಲಿ (Senate) ಬದಲಾವಣೆ ಕಾಣುವ ಸಾಧ್ಯತೆ ಇದೆ. ಈಗಾಗಲೇ ಬೈಡನ್ USD 3.5 ಟ್ರಿಲಿಯನ್ ಬೆಲೆಯಿಂದ ಬಿಲ್ ಅನ್ನು ಕಡಿಮೆ ಮಾಡಲು ಯಶಸ್ವಿಯಾಗಿದ್ದಾರೆ. ಕಳೆದ ವಾರ, ದಾಖಲೆಯ ಹಣದುಬ್ಬರದಿಂದ ಉಂಟಾಗುವ ಬೆದರಿಕೆಯ ಬಗ್ಗೆ ಮಂಚಿನ್ ಮತ್ತೊಮ್ಮೆ ಎಚ್ಚರಿಕೆ ಸಹ ನೀಡಿದ್ದರು.