ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸಾವಿರಾರು ಸೈನಿಕರನ್ನು ಕಳೆದುಕೊಂಡಿದ್ದೇವೆ. ಅಫ್ಘಾನ್ ನಾಯಕರೆಲ್ಲರೂ ಒಂದಾಗಬೇಕು. ಅವರ ದೇಶ ಹಾಗೂ ಅವರಿಗಾಗಿ ಹೋರಾಟ ಮಾಡಬೇಕು. ನಮ್ಮ ಬದ್ಧತೆಯನ್ನು ನಾವು ಮುಂದುವರಿಸುತ್ತೇವೆ. ಆದ್ರೆ ಯುಎಸ್ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿರುವ ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತೆ ಸ್ಪಷ್ಟಪಡಿಸಿದ್ದಾರೆ.
ನೆರೆಯ ಅಫ್ಘಾನ್‌ನಲ್ಲಿ ತಾಲಿಬಾನಿಗಳು ಕ್ರೌರ್ಯ ಮೆರೆಯುತ್ತಿರುವ ಹಿನ್ನೆಲೆಯಲ್ಲಿ ಯುಎಸ್ ಮತ್ತೆ ಸೇನೆಯನ್ನು ಕಳುಹಿಸಬಹುದು ಎಂಬ ಮಾತುಗಳ ಬೆನ್ನಲ್ಲೇ ಬೈಡನ್ ಅವರ ಈ ಸ್ಪಷ್ಟನೆ ಹೊರ ಬಿದ್ದಿದೆ.
ಇದನ್ನೂ ಓದಿ: ಒಂದೇ ದಿನ ಅಫ್ಘನ್ನಲ್ಲಿ 200 ಉಗ್ರರ ಹತ್ಯೆ: ಕುಂಡುಜ್ ನಗರ ವಶಕ್ಕೆ ಪಡೆದ ತಾಲಿಬಾನ್
ಅಮೆರಿಕ ಸೇನೆಯನ್ನು ವಾಪಸ್ ಪಡೆದ ಬಳಿಕ ಅಫ್ಘಾನಿಸ್ತಾನದಲ್ಲಿ ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನಿಗಳು, ಇರಾನಿನ ಗಡಿ ಸೇರಿದಂತೆ ಹಲವು ಪ್ರದೇಶಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ದಾಳಿ ನಡೆಸಿರುವುದು ಅಲ್ಲದೇ, ವಿವಿಧ ಭಾಗಗಳಲ್ಲಿ ಸರ್ಕಾರಿ ಆಸ್ತಿಗಳನ್ನು ಲೂಟಿ ಮಾಡಲಾಗಿದೆ ಎಂದು ತಿಳಿಸಿವೆ.
ಅಫ್ಘಾನ್‌ನ ನೂರಾರು ಯೋಧರನ್ನು ನಿರ್ಧಯವಾಗಿ ಕೊಂದಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ, ಯೋಧರನ್ನು ಕೊಂದಿರುವ ಆರೋಪವನ್ನು ತಾಲಿಬಾನ್ ನಿರಾಕರಿಸಿದೆ. ಅಮೆರಿಕ ಅಫ್ಘಾನ್‌ನಲ್ಲಿ ತನ್ನ ಸೇನೆಯನ್ನು ಹಿಂತೆಗೆದುಕೊಂಡ ಬಳಿಕ ತಾಲಿಬಾನ್ ದುಷ್ಕೃತ್ಯಗಳ ಮೂಲಕ ಅಲ್ಲಿನ ನಗರ, ಪಟ್ಟಣಗಳನ್ನು ತನ್ನ ವಶಕ್ಕೆ ಪಡೆದುಕೊಳ್ಳುತ್ತಿದೆ.