ವಾಷಿಂಗ್ಟನ್ : ಹಾಂಕಾಂಗ್ನಲ್ಲಿ ವಿವಾದಾತ್ಮಕ ರಾಷ್ಟ್ರೀಯ ಭದ್ರತಾ ಕಾನೂನು ಜಾರಿಗೆ ತರುವ ಚೀನಾದ ನಿರ್ಧಾರದ ವಿರುದ್ಧ ಮಸೂದೆಯನ್ನು ಯುಎಸ್ ಸೆನೆಟ್ ಗುರುವಾರ ಅಂಗೀಕರಿಸಿದೆ. ಚೀನಾದ ಕಾನೂನು ಹಾಂಕಾಂಗ್ ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಹಾಳು ಮಾಡುತ್ತದೆ ಎಂದು ವಿಮರ್ಶಕರು ಹೇಳಿದ್ದಾರೆ.
ಯುಎಸ್ ಸೆನೆಟ್ ಹಾಂಕಾಂಗ್ ಸ್ವಾಯತ್ತತೆ ಮಸೂದೆಯನ್ನು ಆಂಗೀಕರಿಸಿದೆ. ಇದರ ಪ್ರಕಾರ ಹಾಂಕಾಂಗ್ ಸ್ವಾಯತ್ತತೆಯನ್ನು ಕಿತ್ತುಕೊಳ್ಳಲು ಚೀನಾಕ್ಕೆ ಸಹಾಯ ಮಾಡುವ ವ್ಯಕ್ತಿಗಳು ಮತ್ತು ವ್ಯವಹಾರಗಳ ಮೇಲೆ ನಿರ್ಬಂಧ ವಿಧಿಸಲಾಗುತ್ತದೆ. ಈ ಮಸೂದೆಯನ್ನು ಪೆನ್ಸಿಲ್ವೇನಿಯಾದ ರಿಪಬ್ಲಿಕನ್ ಸೆನೆಟರ್ ಪ್ಯಾಟ್ ಟೂಮಿ ಮತ್ತು ಮೇರಿಲ್ಯಾಂಡ್‌ನ ಡೆಮಾಕ್ರಟಿಕ್ ಸೆನೆಟರ್ ಕ್ರಿಸ್ ವ್ಯಾನ್ ಹೊಲೆನ್ ಮಂಡಿಸಿದ್ದಾರೆ.
ಹಾಂಕಾಂಗ್ನಲ್ಲಿ ಚೀನಾ ಸರ್ಕಾರ ಮಾಡುತ್ತಿರುವುದು ಸ್ವೀಕಾರಾರ್ಹವಲ್ಲ. ಅವರು ಹಾಂಕಾಂಗ್ ಜನರ ಹಕ್ಕುಗಳನ್ನು ಮತ್ತು ಅಲ್ಲಿನ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ವ್ಯಾನ್ ಹೊಲೆನ್ ಹೇಳಿದ್ದಾರೆ. ಹಾಂಕಾಂಗ್‌ಗೆ ಸ್ವಾಯತ್ತತೆಯನ್ನು ಖಾತರಿಪಡಿಸಿಕೊಳ್ಳಲು 1984ರಲ್ಲಿ ಸಹಿ ಮಾಡಿದ ಚೀನಾ -ಬ್ರಿಟಿಷ್ ಜಂಟಿ ಘೋಷಣೆಯನ್ನು ಉಲ್ಲಂಘಿಸಿದ್ದಕ್ಕಾಗಿ ಚೀನಾದ ನಿರ್ಧಾರವನ್ನು ವಿರೋಧಿಸುವ ಮಸೂದೆ ಮಂಡಿಸಲಾಗಿದೆ ಎಂದು ಮಿಸ್ಸೌರಿಯ ರಿಪಬ್ಲಿಕನ್ ಸೆನೆಟರ್ ಜೋಶ್ ಹಾಲೆ ಹೇಳಿದ್ದಾರೆ.