ವಾಷಿಂಗ್ಟನ್ : ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದ್ವಿಪಕ್ಷೀಯ ಮಾತಕತೆ ನಡೆಸಿದ್ದಾರೆ. ಉಭಯ ರಾಷ್ಟ್ರಗಳ ಸಂಬಂಧ ಬಲಪಡಿಸುವ ಪ್ರತಿಜ್ಞೆ ಮಾಡಿದ್ದಾರೆ. ಇದರ ಜೊತೆಗೆ ನೆರೆಯ ದೇಶಗಳಲ್ಲಿನ ಶಾಂತಿ ಹಾಗೂ ಪ್ರಜಾಪ್ರಭುತ್ವದ ಆಡಳಿತಕ್ಕೂ ಕರೆ ನೀಡಿದ್ದಾರೆ.
ಶ್ವೇತಭವನದಲ್ಲಿ ನಿನ್ನೆ ನಡೆದ ದ್ವಿಪಕ್ಷೀಯ ಸಭೆ ನಂತರ ಜಂಟಿ ಹೇಳಿಕೆ ಬೀಡುಗಡೆ ಮಾಡಿದ ಪ್ರಧಾನಿ ಮೋದಿ, ಅಧ್ಯಕ್ಷ ಜೋ ಬೈಡನ್, ಮ್ಯಾನ್ಮಾರ್‌ನಲ್ಲಿನ ದಂಗೆಯ ವಿರುದ್ಧ ದೃಢವಾದ ನಿಲುವನ್ನು ತೆಗೆದುಕೊಂಡಿದ್ದಾರೆ. ಆ ದೇಶದಲ್ಲಿ ಪ್ರಜಾಪ್ರಭುತ್ವ ಶೀಘ್ರ ಮರಳಬೇಕು, ಹಿಂಸಾಚಾರ ನಿಲ್ಲಿಸಿ ಬಂಧಿತ ಎಲ್ಲಾ ರಾಜಕಾರಣಿಗಳ ಬಿಡುಗಡೆ ಮಾಡಬೇಕು ಎಂದು ಹೇಳಿದ್ದಾರೆ.
ಮ್ಯಾನ್ಮಾರ್ ಕುರಿತು ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ-ಆಸಿಯಾನ್‌ನ ಒಮ್ಮತದ ಐದು ಅಂಶಗಳನ್ನು ತುರ್ತಾಗಿ ಜಾರಿಗೊಳಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆಂಗ್ ಸಾನ್ ಸೂಕಿ ನೇತೃತ್ವದ ಚುನಾಯಿತ ಸರ್ಕಾರವನ್ನು ಉರುಳಿಸಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ನಂತರ 2021ರ ಫೆಬ್ರವರಿ 1ರಂದು ಮ್ಯಾನ್ಮಾರ್ ಸೇನೆ ಅಧಿಕಾರವನ್ನು ವಶಪಡಿಸಿಕೊಂಡಿತು.
ಮ್ಯಾನ್ಮಾರ್‌ನಲ್ಲಿ ಅಂದಾಜು 3,400 ಜನ ಇನ್ನೂ ಸೈನ್ಯದ ಬಂಧನದಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ. ಆಗ್ನೇಯ ಏಷ್ಯಾದ ರಾಷ್ಟ್ರಗಳ ಸಂಘ(ಆಸಿಯಾನ್) ಕಳೆದ ತಿಂಗಳು ಐದು ಅಂಶಗಳನ್ನು ತಂದಿದೆ. ಒಮ್ಮತದೊಂದಿಗೆ ಮ್ಯಾನ್ಮಾರ್‌ನಲ್ಲಿ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಬೇಕು.
ಎಲ್ಲಾ ಪಕ್ಷಗಳು ಅತ್ಯಂತ ಸಂಯಮ ಹೊಂದಿರಬೇಕು ಎಂದು ಹೇಳಿತ್ತು. ಸಂಬಂಧಪಟ್ಟ ಎಲ್ಲ ಪಕ್ಷಗಳ ನಡುವೆ ರಚನಾತ್ಮಕ ಸಂವಾದ, ಜನರ ಹಿತಾಸಕ್ತಿಗಾಗಿ ಶಾಂತಿಯುತ ಪರಿಹಾರ ಹುಡುಕಲು ಆರಂಭಿಸಬೇಕು ಎಂದು ಹೇಳಿದೆ.
ಹಿಂಸಾಚಾರಕ್ಕಿಳಿದ ತಾಲಿಬಾನ್‌ಗೆ ಭಾರತ, ಅಮೆರಿಕ ಖಡಕ್ ಸಂದೇಶ
ಮಾನವ ಹಕ್ಕುಗಳನ್ನು ಗೌರವಿಸುವುದಾಗಿ ಹೇಳಿರುವ ತಾಲಿಬಾನ್‌ಗಳು ಅದಕ್ಕೆ ಬದ್ಧರಾಗಿಬೇಕು ಎಂದು ಅಫ್ಘಾನಿಸ್ತಾನದಲ್ಲಿ ಹಿಂಸಾಚಾರಕ್ಕೆ ಇಳಿದಿರುವ ತಾಲಿಬಾನ್ ಆಡಳಿತಕ್ಕೆ ಉಭಯ ನಾಯಕರು ಜಂಟಿ ಹೇಳಿಕೆಯಲ್ಲಿ ಖಡಕ್ ಸಂದೇಶ ರವಾನಿಸಿದರು.
ಮಹಿಳೆಯರು, ಮಕ್ಕಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ಸೇರಿ ಎಲ್ಲಾ ಅಫ್ಘಾನಿಸ್ತಾನದ ಮಾನವ ಹಕ್ಕುಗಳನ್ನು ಗೌರವಿಸಬೇಕು. ಯಾವುದೇ ದೇಶವನ್ನು ಬೆದರಿಸಲು ಅಥವಾ ದಾಳಿ ಮಾಡಲು ಅಥವಾ ಭಯೋತ್ಪಾದಕರಿಗೆ ಆಶ್ರಯ ನೀಡಲು ಅಥವಾ ತರಬೇತಿ, ಹಣ ನೀಡಲು ಅಫ್ಘಾನ್ ನೆಲವನ್ನು ಬಳಸಬಾರದು ಎಂದರಲ್ಲದೆ, ಅಫ್ಘಾನ್‌ನಲ್ಲಿ ಭಯೋತ್ಪಾದನೆಯನ್ನು ಎದುರಿಸುವ ಮಹತ್ವವನ್ನು ಒತ್ತಿ ಹೇಳಿದ್ದಾರೆ.