ವಾಷಿಂಗ್ಟನ್: ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್ ರೂಪಾಂತರಿ 'ಒಮಿಕ್ರೋನ್' ಅಮೆರಿಕಾದಲ್ಲೂ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದ ವ್ಯಕ್ತಿಯಲ್ಲಿ ಒಮಿಕ್ರೋನ್ ಪತ್ತೆಯಾಗಿದೆ ಎಂದು ಅಮೆರಿಕಾ ದೃಢಪಡಿಸಿದೆ.
ಕ್ಯಾಲಿಫೋರ್ನಿಯಾದಲ್ಲಿರುವ ವ್ಯಕ್ತಿಯಲ್ಲಿ ಹೊಸ ರೂಪಾಂತರಿ ಕಂಡುಬಂದಿದೆ. ಸೋಂಕಿತ ಈಗಾಗಲೇ ಕೋವಿಡ್ ಲಸಿಕೆ ಪಡೆದಿದ್ದಾರೆ ಎಂದು ಯುಎಸ್ ಅಧ್ಯಕ್ಷರ ಮುಖ್ಯ ವೈದ್ಯಕೀಯ ಸಲಹೆಗಾರ ಡಾ.ಆಂಥೋನಿ ಪೌಸಿ ಮಾಹಿತಿ ನೀಡಿದ್ದಾರೆ. ಈ ಸೋಂಕಿತ ನ.22 ರಂದು ದಕ್ಷಿಣ ಆಫ್ರಿಕಾದಿಂದ ಬಂದಿದ್ದು, ನ.19 ರಂದು ಕೋವಿಡ್ ಪಾಸಿಟಿವ್ ಕಂಡುಬಂದಿತ್ತು. ಸೋಂಕಿತ ಸ್ವಯಂ ಕ್ವಾರಂಟೈನ್ ಆಗಿದ್ದಾರೆ. ಇವರ ಸಂಪರ್ಕಿತರ ವರದಿ ನೆಗೆಟಿವ್ ಬಂದಿದೆ ಎಂದು ಇವರು ತಿಳಿಸಿದ್ದಾರೆ.
ಅಮೆರಿಕಾದಲ್ಲಿ ಒಮಿಕ್ರೋನ್ ಕಂಡುಬಂದ ಬೆನ್ನಲ್ಲೆ ಶ್ವೇತ ಭವನ ಪ್ರಕಟಣೆ ಹೊರಡಿಸಿದ್ದು, ದೇಶವಾಸಿಗಳು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದೆ.
ಒಮಿಕ್ರೋನ್ ರೂಪಾಂತರಿ ವಿಶ್ವದಾದ್ಯಂತ ಭೀತಿ ಮೂಡಿಸಿದ್ದು, ಈ ಸೋಂಕು ಹರಡುವುದನ್ನು ತಡೆಯಲು ಎಲ್ಲ ದೇಶಗಳು ಕಠಿಣ ಕ್ರಮ ಕೈಗೊಳ್ಳುತ್ತಿವೆ.
(ಇದನ್ನೂ ಓದಿ: 235 ಕೆಜಿ ತೂಕದ ವ್ಯಕ್ತಿ: 34 ಕೆಜಿ ಇಳಿಸಿದ ಮಣಿಪಾಲ್ ಆಸ್ಪತ್ರೆ ವೈದ್ಯರು)