ನ್ಯೂಯಾರ್ಕ್: ಕೋವಿಡ್ -19 ನಿಂದ ಬಳಲುತ್ತಿರುವ ಮಕ್ಕಳು ಮತ್ತು ಯುವಕರಿಗೆ ತಮ್ಮ ಶಿಕ್ಷಣವನ್ನು ಮನೆಯಲ್ಲಿಯೇ ಮುಂದುವರಿಸಲು ಸಹಾಯ ಮಾಡಲು ಜಾಗತಿಕ ಕಲಿಕಾ ವೇದಿಕೆಯ ವಿಸ್ತರಣೆಗಾಗಿ ಮೈಕ್ರೋಸಾಫ್ಟ್, ಯುನೈಟೆಡ್ ನೇಷನ್ಸ್ ಚಿಲ್ಡ್ರನ್ ಫಂಡ್ (ಯುನಿಸೆಫ್) ನೊಂದಿಗೆ ಸಹಭಾಗಿತ್ವ ಹೊಂದಿದೆ.
ಕಳೆದ 18 ತಿಂಗಳುಗಳಿಂದ ಅಭಿವೃದ್ಧಿಯಲ್ಲಿರುವ "ಲರ್ನಿಂಗ್ ಪಾಸ್‌ಪೋರ್ಟ್" ಎಂಬ ವೇದಿಕೆ ಈ ವರ್ಷ ಪ್ರಾಯೋಗಿಕ ಕಾರ್ಯಕ್ರಮವಾಗಿ ಪ್ರಾರಂಭವಾಗಲಿದೆ.
ಕೊರೊನಾ ಆತಂಕದಿಂದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಆನ್‌ಲೈನ್‌ನಲ್ಲಿ ಕಲಿಸುವ ಸಾಮರ್ಥ್ಯವಿರುವ ಪಠ್ಯಕ್ರಮವನ್ನು ಹೊಂದಿರುವ ಎಲ್ಲ ದೇಶಗಳು, ಮನೆಯಲ್ಲಿ ಸಾಧನಗಳನ್ನು ಹೊಂದಿರುವ ಮಕ್ಕಳು ಮತ್ತು ಯುವಕರಿಗೆ ಆನ್‌ಲೈನ್ ಕಲಿಕೆಗೆ "ಲರ್ನಿಂಗ್ ಪಾಸ್‌ಪೋರ್ಟ್" ಅನುಕೂಲವಾಗಲಿದೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ.
ಶಾಲಾ ಮಕ್ಕಳಿಗೆ ಲಭ್ಯವಿರುವ ವಿಷಯವು ಆನ್‌ಲೈನ್ ಪುಸ್ತಕಗಳು, ವಿಡಿಯೋಗಳು ಮತ್ತು ಮಕ್ಕಳ ಪೋಷಕರಿಗೆ ಅಭ್ಯಾಸ ಮಾಡಿಸಲು ಉಪಯುಕ್ತವಾಗುವ ಎಲ್ಲ ಅಂಶಗಳನ್ನು ಒಳಗೊಂಡಿದೆ.
ಯುನೆಸ್ಕೋದ ಇತ್ತೀಚಿನ ಲಭ್ಯವಿರುವ ಮಾಹಿತಿಯ ಪ್ರಕಾರ, ವಿಶ್ವದಾದ್ಯಂತ 190 ಕ್ಕೂ ಹೆಚ್ಚು ದೇಶಗಳಲ್ಲಿ 1.57 ಬಿಲಿಯನ್ ವಿದ್ಯಾರ್ಥಿಗಳು ಶಾಲಾ ರಜೆಯ ಪರಿಣಾಮವನ್ನು ಎದುರಿಸಿದ್ದಾರೆ.
ಈ ಸಮಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ತಮ್ಮ ತರಗತಿಯನ್ನು ತಮ್ಮ ಮನೆಗೆ ತರಲು ಡಿಜಿಟಲ್ ಕಲಿಕೆಯ ಅಂತರವನ್ನು ನಿವಾರಿಸಲು ಯುನಿಸೆಫ್‌ನ ಲರ್ನಿಂಗ್ ಪಾಸ್‌ಪೋರ್ಟ್ ಸಹಾಯ ಮಾಡಲಿದೆ ಎಂದು ಮೈಕ್ರೋಸಾಫ್ಟ್ ಅಧ್ಯಕ್ಷ ಬ್ರಾಡ್ ಸ್ಮಿತ್ ಹೇಳಿದರು.