ನ್ಯೂಯಾರ್ಕ್: ಕೋವಿಡ್-19ನಿಂದಾಗಿ ಜಾಗತಿಕ ಆಹಾರ ತುರ್ತು ಪರಿಸ್ಥಿತಿ ಎದುರಾಗಬಹುದು. ಇದನ್ನು ತಡೆಗಟ್ಟಲು ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಚ್ಚರಿಸಿದ್ದಾರೆ.
ಕೊರೊನಾ ವೈರಸ್‌ನ ಪರಿಣಾಮದಿಂದಾಗಿ 820 ಮಿಲಿಯನ್‌ಗೂ ಅಧಿಕ ಮಂದಿ ಹಸಿವಿನಿಂದ ಬಳಲುವ ಸಾಧ್ಯತೆ ಇದೆ. 5 ವರ್ಷದೊಳಗಿನ 144 ಮಿಲಿಯನ್ ಮಕ್ಕಳ ಬೆಳವಣಿಗೆಗೂ ಇದು ಸಮಸ್ಯೆಯಾಗಲಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕಳವಳ ವ್ಯಕ್ತಪಡಿಸಿದ್ದಾರೆ.
ಆಹಾರ ಭದ್ರತೆ ಮತ್ತು ಪೌಷ್ಠಿಕಾಂಶದ ಮೇಲೆ ಕೋವಿಡ್‌ನ ಪರಿಣಾಮಗಳ ಕುರಿತ ನಿಯಮಗಳನ್ನು ಬಿಡುಗಡೆ ಮಾಡಿದ ಬಳಿಕ ಮಾತನಾಡುತ್ತಾ, ವಿಶ್ವದಲ್ಲಿ 7.8 ಬಿಲಿಯನ್ ಜನರಿಗೆ ಸಾಕಾಗುವಷ್ಟು ಆಹಾರವಿದೆ. ಆದ್ರೆ ಆಹಾರದ ಪೂರೈಕೆ ವ್ಯವಸ್ಥೆ ಸರಿಯಾಗಿಲ್ಲ ಎಂದಿದ್ದಾರೆ.
ಕೊರೊನಾ ಮಹಾಮಾರಿಯಿಂದ 49 ಮಿಲಿಯನ್‌ಗೂ ಅಧಿಕ ಜನರು ಕಡು ಬಡತನಕ್ಕೆ ಸಿಲುಕಿದ್ದಾರೆ. ಆಹಾರ ಅಥವಾ ಪೌಷ್ಠಿಕಾಂಶದ ಕೊರತೆ ಎದುರಿಸುತ್ತಿರುವ ಜನಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಆಹಾರ ಮತ್ತು ಪೌಷ್ಠಿಕಾಂಶಯುಕ್ತ ಪದಾರ್ಥಗಳನ್ನು ಅವಶ್ಯಕತೆ ಇರುವವರಿಗೆ ಒದಗಿಸಬೇಕು. ಆಹಾರ ಕಾರ್ಯಕರ್ತರು ಇವರನ್ನು ರಕ್ಷಿಸಬೇಕು ಎಂದು ಸೂಚಿಸಿದ್ದಾರೆ.
ಎಲ್ಲಾ ದೇಶಗಳು ಸುರಕ್ಷತೆಯ ಬಗ್ಗೆ ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ಮಕ್ಕಳು, ಗರ್ಭಿಣಿಯರು, ಎದೆಹಾಲುಣಿಸುವ ಮಹಿಳೆಯರು, ಹಿರಿಯರು ಮತ್ತು ಇತರೆ ಸಂಕಷ್ಟಕ್ಕೆ ಸಿಲುಕಿರುವವರಿಗೆ ಪೌಷ್ಠಿಕಾಂಶದ ಆಹಾರ ನೀಡಬೇಕು ಎಂದಿದ್ದಾರೆ.