ವಾಷಿಂಗ್ಟನ್: ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳು ಇಂಡೋ - ಪೆಸಿಫಿಕ್ ಪ್ರದೇಶದ ಭದ್ರತೆಗಾಗಿ ಹೊಸ ತ್ರಿಪಕ್ಷೀಯ ಭದ್ರತಾ ಮೈತ್ರಿಕೂಟವನ್ನು ರಚಿಸಿಕೊಂಡಿವೆ. ಇದರಲ್ಲಿ ಮೂರು ರಾಷ್ಟ್ರಗಳ ಹಿತಾಸಕ್ತಿಗಳನ್ನು ರಕ್ಷಿಸಲು ಸಹಾಯ ಮಾಡುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಒಪ್ಪಂದ ಮಾಡಿಕೊಂಡಿವೆ.
AUKUS ಮೈತ್ರಿಕೂಟವನ್ನು ಬುಧವಾರ ಆರಂಭಿಸಲಾಯಿತು. ಈ ಮೈತ್ರಿಯಡಿ ಮೂರು ರಾಷ್ಟ್ರಗಳ ಜಂಟಿ ಸಾಮರ್ಥ್ಯಗಳು ಮತ್ತು ತಂತ್ರಜ್ಞಾನ ಹಂಚಿಕೆ, ಭದ್ರತೆ, ರಕ್ಷಣಾ - ಸಂಬಂಧಿತ ವಿಜ್ಞಾನ, ತಂತ್ರಜ್ಞಾನ, ಕೈಗಾರಿಕಾ ನೆಲೆಗಳು ಮತ್ತು ಪೂರೈಕೆ ಸರಪಳಿಗಳಿಗೆ ಪರಸ್ಪರ ಮೂರು ರಾಷ್ಟ್ರಗಳು ಒಪ್ಪಿಕೊಂಡಿವೆ.
‘ಮೂರು ದೇಶಗಳ ಹಿತಾಸಕ್ತಿ ಒಂದೇ’
AUKUSನ ಮೈತ್ರಿ ಭಾಗವಾಗಿ ಆಸ್ಟ್ರೇಲಿಯಾವು ಅಮೆರಿಕ ಮತ್ತು ಬ್ರಿಟನ್ ಸಹಾಯದಿಂದ ಪರಮಾಣು - ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವುದು. ಈ ಮೂಲಕ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸ್ಥಿರತೆ ಕಾಪಾಡುವ ಗುರಿ ಹೊಂದಿದೆ. ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ಭೌಗೋಳಿಕವಾಗಿ ಬೇರ್ಪಟ್ಟಿರಬಹುದು. ಆದರೆ, ನಮ್ಮ ಮೂರು ದೇಶಗಳ ಹಿತಾಸಕ್ತಿ, ಮೌಲ್ಯಗಳು ಒಂದೇ ಆಗಿವೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
‘ನಮ್ಮ ಸ್ನೇಹ ಹೊಸ ಅಧ್ಯಾಯಕ್ಕೆ ಮುನ್ನುಡಿ’
ಈ ಮೈತ್ರಿಯು ಮೂರು ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ವೃದ್ಧಿಗೊಳಿಸುತ್ತದೆ. ಹೊಸ ರಕ್ಷಣಾ ಪಾಲುದಾರಿಕೆ ಸೃಷ್ಟಿ ಜತೆಗೆ ಸಮೃದ್ಧಿಗೆ ಚಾಲನೆ ನೀಡುತ್ತದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ನಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ಈ ಮೈತ್ರಿ ಮಹತ್ವದ್ದಾಗಿದೆ. ಅಲ್ಲದೇ, ನಮ್ಮ ಸ್ನೇಹದಿಂದ ಹೊಸ ಅಧ್ಯಾಯ ಶುರುವಾಗುತ್ತಿದೆ ಎಂದು ಬೋರಿಸ್ ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಜಲಾಂತರ್ಗಾಮಿ ನೌಕೆಗಳ ನಿರ್ಮಾಣ
ನಾವು ಈ ಜಲಾಂತರ್ಗಾಮಿ ನೌಕೆಗಳನ್ನು ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಇಂಗ್ಲೆಂಡ್ ಮತ್ತು ಅಮೆರಿಕದ ನಿಕಟ ಸಹಕಾರದೊಂದಿಗೆ ನಿರ್ಮಿಸಲು ಉದ್ದೇಶಿಸಿದ್ದೇವೆ ಎಂದು ಅವರು ಹೇಳಿದರು. ಆಸ್ಟ್ರೇಲಿಯಾವು ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ಅಥವಾ ನಾಗರಿಕ ಪರಮಾಣು ಸಾಮರ್ಥ್ಯ ಸ್ಥಾಪಿಸಲು ಪ್ರಯತ್ನಿಸುತ್ತಿಲ್ಲ ಎಂದು ಪ್ರಧಾನಿ ಮಾರಿಸನ್ ಪ್ರತಿಪಾದಿಸಿದರು.
‘ಮೈತ್ರಿ ಮೂಲಕ ಮತ್ತಷ್ಟು ಹತ್ತಿರ’
ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ಬಹಳ ಹಿಂದಿನಿಂದಲೂ ನಿಷ್ಠಾವಂತ ಮತ್ತು ಸಮರ್ಥ ಪಾಲುದಾರರಾಗಿದ್ದಾರೆ. ಈ ಮೈತ್ರಿ ಮೂಲಕ ನಾವು ಮತ್ತಷ್ಟು ಹತ್ತಿರವಾಗುತ್ತಿದ್ದು, ಐತಿಹಾಸಿಕ ಹೆಜ್ಜೆಯನ್ನಿಡುತ್ತಿದ್ದೇವೆ. ಸೈಡರ್, ಕೃತಕ ಬುದ್ಧಿಮತ್ತೆ, ಕ್ವಾಂಟಮ್ ತಂತ್ರಜ್ಞಾನಗಳು ಮತ್ತು ಸಾಗರದೊಳಗಿನ ಡೊಮೇನ್‌ಗಳಂತಹ ನಿರ್ಣಾಯಕ ತಂತ್ರಜ್ಞಾನಗಳು ಮತ್ತು ಸೈನಿಕ ಸಾಮರ್ಥ್ಯಗಳನ್ನು ನಿರ್ವಹಿಸಲು ನಾವು ಒಟ್ಟುಗೂಡುತ್ತಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಇದನ್ನೂ ಓದಿ:Jal Jeevan Mission: PHED ಸಚಿವರ ಸಮ್ಮೇಳನದ ಅಧ್ಯಕ್ಷತೆ ವಹಿಸಲಿರುವ ಗಜೇಂದ್ರ ಸಿಂಗ್ ಶೇಖಾವತ್
ನಾವು ಪರಮಾಣು ಸಶಸ್ತ್ರ ಜಲಾಂತರ್ಗಾಮಿ ನೌಕೆಗಳ ಬಗ್ಗೆ ಮಾತನಾಡುತ್ತಿಲ್ಲ. ಅವು ಸಾಂಪ್ರದಾಯಿಕವಾಗಿ ಸಶಸ್ತ್ರ ಜಲಾಂತರ್ಗಾಮಿ ನೌಕೆಗಳಾಗಿದ್ದು, ಪರಮಾಣು ರಿಯಾಕ್ಟರ್‌ಗಳಿಂದ ಚಾಲಿತವಾಗುತ್ತವೆ. ಅಮೆರಿಕ ಮತ್ತು ಬ್ರಿಟನ್ ರಾಷ್ಟ್ರಗಳು ದಶಕಗಳಿಂದ ಪರಮಾಣು ಚಾಲಿತ ಜಲಾಂತರ್ಗಾಮಿಗಳನ್ನು ನಿರ್ವಹಿಸುತ್ತಿವೆ ಎಂದು ಬೈಡನ್ ಹೇಳಿದರು. ಈ ಒಪ್ಪಂದವು ನಮ್ಮ ಮೂರು ದೇಶಗಳ ನಡುವಿನ ನಂಬಿಕೆ ಮತ್ತು ಸಹಕಾರವನ್ನು ಪ್ರತಿಬಿಂಬಿಸುತ್ತದೆ ಎಂದು ಬೈಡನ್ ಅಭಿಪ್ರಾಯ ಪಟ್ಟಿದ್ದಾರೆ.