ಹೂಸ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಲ್ಲಿ ನಡೆಯಲಿರುವ 'ಹೌಡಿ ಮೋದಿ' (ಹೇಗಿದ್ದಿರಾ ಮೋದಿ) ಸಮಾವೇಶದಲ್ಲಿ 50 ಸಾವಿರ ಭಾರತ ಮತ್ತು ಭಾರತೀಯ ಅಮೆರಿಕನ್ನ ಸಮುದಾಯವನ್ನು ಉದ್ದೇಶಿಸಿ 30 ನಿಮಿಷಗಳ ಕಾಲ ಮಾತನಾಡಲಿದ್ದಾರೆ ಎಂಬ ನಿರೀಕ್ಷೆಯಿದೆ.
ವಿಶ್ವದ ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಸ್ನೇಹ- ಸಂಬಂಧ ಶಾಶ್ವತವಾಗಿ ಮುಂದುವರಿಯಲು ಇದೊಂದು ಅಪೂರ್ವ ವೇದಿಕೆ ಆಗಲಿದೆ ಎಂದು ವ್ಯಾಖ್ಯಾನಿಸಲಾಗಿದೆ. 45ನೇ ಅಧ್ಯಕ್ಷರಾದ ಟ್ರಂಪ್, ಅನಿವಾಸಿ ಅಮೆರಿಕನ್ನರ ಕಾರ್ಯಕ್ರಮದಲ್ಲಿ ಇದೇ ಪ್ರಥಮ ಬಾರಿಗೆ ಸುದೀರ್ಘ ಅವಧಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
2016ರಲ್ಲಿ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿದ್ದಾಗ, 'ಭಾರತ ನನ್ನ ಅತ್ಯುತ್ತಮ ಸ್ನೇಹಿತ'ನೆಂದು ಅಮೆರಿಕದಲ್ಲಿನ ಭಾರತೀಯರ ಮನಸ್ಸನ್ನು ಗೆದಿದ್ದರು. ಮುಂದೆ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಭಾರತೀಯರನ್ನು ಇನ್ನಷ್ಟು ಸೆಳೆಯುವ ಪ್ರಯತ್ನವಿರಬಹುದು ಎನ್ನಲಾಗುತ್ತಿದೆ.
ಹೂಸ್ಟನ್‌ಗೆ ಬಂದು 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಹಾಜರಾಗುವ ಮೂಲಕ, ಅವರು (ಟ್ರಂಪ್) ಭಾರತೀಯ- ಅಮೆರಿಕನ್ನರ ಮನ ಗೆದ್ದಿದ್ದಾರೆ. 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಭಾರತೀಯ ಅಮೆರಿಕನ್ನರಿಂದ ಹೆಚ್ಚಿನ ಮತಗಳನ್ನು ಗಳಿಸಲಿದ್ದಾರೆ ಎಂದು ಭಾರತೀಯ- ಅಮೆರಿಕ ಸಮುದಾಯದ ಮುಖಂಡ ಭಾರತ್ ಬಾರೈ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.