ವಿಲ್ಮಿಂಗ್ಟನ್(ಅಮೆರಿಕ): ಅಧ್ಯಕ್ಷೀಯ ಚುನಾವಣೆಯಲ್ಲಿ ಜನರು ನಮಗೆ ಸ್ಪಷ್ಟ ವಿಜಯ ನೀಡುವ ಮೂಲಕ ಅಮೆರಿಕದ ಜನರು ತಮ್ಮ ಆಯ್ಕೆಯನ್ನು ಸ್ಪಷ್ಟಪಡಿಸಿದ್ದಾರೆ ಎಂದು ಜೋ ಬೈಡನ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಬಳಿಕ ಮಾತನಾಡಿರುವ ಬೈಡನ್, ರಾಷ್ಟ್ರದ ಇತಿಹಾಸದಲ್ಲೇ ಈ ಅಧ್ಯಕ್ಷೀಯ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಗಳಿಸಿ(74 ಮಿಲಿಯನ್) ನಾವು ಗೆದ್ದಿದ್ದೇವೆ ಎಂದರು.
"ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸದಿಂದ ನಾನು ವಿನಮ್ರನಾಗಿದ್ದೇನೆ" ಎಂದಿದ್ದಾರೆ. "ಡೊನಾಲ್ಡ್ ಟ್ರಂಪ್‌ಗೆ ಮತ ಹಾಕಿದವರಿಗೆ ಈ ರಾತ್ರಿ ಆಗಿರುವ ನಿರಾಶೆಯನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ. ಕಠಿಣ ವಾಕ್ಚಾತುರ್ಯವನ್ನು ದೂರವಿಡಲು, ತಾಪಮಾನವನ್ನು ಕಡಿಮೆ ಮಾಡಲು, ಪ್ರಗತಿ ಸಾಧಿಸಲು ಸಮಯ ಬಂದಿದೆ. ನಾವು ನಮ್ಮ ವಿರೋಧಿಗಳನ್ನು ನಮ್ಮ ಶತ್ರುಗಳಂತೆ ಪರಿಗಣಿಸುವುದನ್ನು ನಿಲ್ಲಿಸಬೇಕು. ಅವರು ನಮ್ಮ ಶತ್ರುಗಳಲ್ಲ, ಅವರು ಅಮೆರಿಕನ್ನರು" ಎಂದು ಕರೆಯುವ ಮೂಲಕ ಬೈಡನ್ ದೊಡ್ಡತನ ಮೆರೆದಿದ್ದಾರೆ.
"ಪ್ರತಿಯೊಂದಕ್ಕೂ ಒಂದು ಋತುಮಾನ ಇರುತ್ತದೆ ಎಂದು ಬೈಬಲ್ ಹೇಳುತ್ತದೆ. ನಿರ್ಮಿಸಲು ಒಂದು ಸಮಯ, ಕೊಯ್ಯಲು ಒಂದು ಸಮಯ ಮತ್ತು ಬಿತ್ತನೆ ಮಾಡಲು ಒಂದು ಸಮಯ ಮತ್ತು ಗುಣವಾಗಲು ಒಂದು ಸಮಯವಿದೆ. ಇದು ಅಮೆರಿಕವನ್ನು ಗುಣಪಡಿಸುವ ಸಮಯ" ಎಂದು ಬೈಡನ್ ಹೇಳಿದ್ದಾರೆ.
ಇದೇ ವೇಳೆ ಉಪಾಧ್ಯಕ್ಷರಾಗಿ ಚುನಾಯಿತರಾದ ನಂತರ ಮೊದಲಬಾರಿಗೆ ಮಾತನಾಡಿದ ಕಮಲಾ ಹ್ಯಾರಿಸ್, ದಾಖಲೆಯ ಸಂಖ್ಯೆಯಲ್ಲಿ ಮತ ನೀಡಿದ್ದಕ್ಕೆ ಧನ್ಯವಾದ ತಿಳಿಸಿದ್ರು ಮತ್ತು ಅಮೆರಿಕನ್ನರು ದೇಶಕ್ಕೆ ಹೊಸ ದಿನವನ್ನು ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
"ನೀವು ಸ್ಪಷ್ಟ ಸಂದೇಶವನ್ನು ನೀಡಿದ್ದೀರಿ, ನೀವು ಭರವಸೆ ಮತ್ತು ಏಕತೆ, ಸಭ್ಯತೆ, ವಿಜ್ಞಾನ ಮತ್ತು ಸತ್ಯವನ್ನು ಆರಿಸಿದ್ದೀರಿ. ನೀವು ಜೋ ಬೈಡನ್ ಅವರನ್ನು ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದೀರಿ, ಅಮೆರಿಕಕ್ಕೆ ಹೊಸ ದಿನವನ್ನು ನೀಡಿದ್ದೀರಿ" ಎಂದು ಬಣ್ಣಿಸಿದ್ದಾರೆ.