ಹೈದರಾಬಾದ್: ಐಪಿಎಲ್ ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಎಲ್ಲಾ ತಂಡಗಳು ತಮ್ಮ ರಿಟೇನ್ ಆಟಗಾರರ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದು ಗೊತ್ತೇ ಇದೆ. ಆದರೆ ಈ ಬಾರಿ ಕೆಲ ತಂಡಗಳು ಸ್ಟಾರ್ ಆಟಗಾರರನ್ನು ರಿಟೇನ್ನಿಂದ ಕೈಬಿಟ್ಟು ಅಚ್ಚರಿ ಮೂಡಿಸಿವೆ. ಅದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೂಡ ಒಂದು.
ಹೌದು, ಆರ್‌ಸಿಬಿ ತಂಡ ಈ ಬಾರಿ ಕೇವಲ ಮೂವರು ಆಟಗಾರರನ್ನು ಮಾತ್ರ ರಿಟೇನ್ ಮಾಡಿಕೊಂಡಿದ್ದು ಉಳಿದ ಆಟಗಾರರನ್ನು ಹರಾಜಿಗಿಟ್ಟಿದೆ. ವಿರಾಟ್ ಕೊಹ್ಲಿ (21 ಕೋಟಿ ರೂ.), ರಜತ್ ಪಾಟಿದಾರ್ (11 ಕೋಟಿ ರೂ) ಮತ್ತು ಯಶ್ ದಯಾಳ್ (5 ಕೋಟಿ ರೂ) ಮಾತ್ರ ತಂಡದಲ್ಲಿ ಉಳಿದುಕೊಂಡಿದ್ದಾರೆ. ಇದರೊಂದಿಗೆ ಆರ್‌ಸಿಬಿ ಪರ್ಸ್ನಲ್ಲಿ ₹83 ಕೋಟಿ ಉಳಿಸಿಕೊಂಡಿದೆ. ಮತ್ತು ಮೂರು ರೈಟ್ ಟು ಮ್ಯಾಚ್ (RTM) ಕಾರ್ಡ್‌ಗಳನ್ನು ಹೊಂದಿದೆ.
ಆದರೆ, 2021ರಿಂದ ತಂಡದಲ್ಲಿರುವ ಮ್ಯಾಕ್ಸ್‌ವೆಲ್ ಅವರನ್ನು ಬೆಂಗಳೂರು ತಂಡ ಉಳಿಸಿಕೊಳ್ಳದಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ. ಇದರ ನಡುವೆಯೇ ಇಎಸ್ಪಿಎನ್ ಕ್ರಿಕ್ಇನ್ಫೋ ಜೊತೆಗೆ ಮ್ಯಾಕ್ಸ್‌ವೆಲ್ ಹೇಳಿಕೆಯೊಂದನ್ನು ನೀಡಿದ್ದಾರೆ. "ಈ ಬಾರಿ ಬಲಿಷ್ಠ ತಂಡ ಕಟ್ಟಲು ಆರ್‌ಸಿಬಿ ಸಂಕಲ್ಪ ತೊಟ್ಟಿದೆ. ವಿಶೇಷವಾಗಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿದೆ. ಆದರೆ ಆರ್‌ಸಿಬಿ ಜೊತೆಗಿನ ನನ್ನ ಪ್ರಯಾಣ ಇಲ್ಲಿಗೆ ಮುಗಿಯುವುದಿಲ್ಲ. ಮತ್ತೆ ತಂಡಕ್ಕೆ ಮರಳಲಿದ್ದೇನೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: 2022ರಲ್ಲಿ Unsold ಆಗಿದ್ದ ಆರ್‌ಸಿಬಿ ಮಾಜಿ ಆಟಗಾರ ಅತೀ ಹೆಚ್ಚು ಮೊತ್ತಕ್ಕೆ ರಿಟೇನ್!
ಮ್ಯಾಕ್ಸ್‌ವೆಲ್ ಆರ್‌ಸಿಬಿಯ ಪ್ರಮುಖ ಆಟಗಾರ. ಹಲವು ಪಂದ್ಯಗಳಲ್ಲಿ ಮಹತ್ವದ ಇನ್ನಿಂಗ್ಸ್ ಆಡಿ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ. ಆದರೆ ಕಳೆದ ಋತುವಿನಲ್ಲಿ ತುಂಬಾ ನಿರಾಶಾದಾಯಕ ಪ್ರದರ್ಶನ ತೋರಿದ್ದರು. 9 ಇನ್ನಿಂಗ್ಸ್‌ಗಳಲ್ಲಿ ಕೇವಲ 52 ರನ್ ಗಳಿಸಿದ್ದರು.
ಮ್ಯಾಕ್ಸ್‌ವೆಲ್ ಐಪಿಎಲ್ ದಾಖಲೆ: ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡ್ ಗ್ಲೆನ್ ಮ್ಯಾಕ್ಸ್‌ವೆಲ್ ಇದುವರೆಗೂ ಐಪಿಎಲ್ನಲ್ಲಿ ಒಟ್ಟು 134 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 24.74ರ ಸರಾಸರಿಯಲ್ಲಿ 2,771 ರನ್ ಗಳಿಸಿದ್ದಾರೆ. ಇದರಲ್ಲಿ 18 ಅರ್ಧಶತಕಗಳು ಸೇರಿವೆ. 95 ಹೈಸ್ಕೋರ್ ಆಗಿದೆ.
ಮೆಗಾ ಹರಾಜು: ಐಪಿಎಲ್ 2025 ಮೆಗಾ ಹರಾಜು ನವೆಂಬರ್ 24 ಮತ್ತು 25ರಂದು ಜೆಡ್ಡಾದಲ್ಲಿ (ಸೌದಿ ಅರೇಬಿಯಾ) ನಡೆಯಲಿದೆ. ಹರಾಜಿನಲ್ಲಿ ಒಟ್ಟು 1,574 ಕ್ರಿಕೆಟಿಗರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 1,165 ಭಾರತೀಯರು ಮತ್ತು 409 ವಿದೇಶಿಗರು ಸೇರಿದ್ದಾರೆ.
ಇದನ್ನೂ ಓದಿ: ರೋಹಿತ್ ಶರ್ಮಾ ನಂತರ ಟೀಂ ಇಂಡಿಯಾದ ಮುಂದಿನ ಕ್ಯಾಪ್ಟನ್ ಇವರೇ: ಸಿಕ್ಕಿತು ದೊಡ್ಡ ಸುಳಿವು!