ಹುಬ್ಬಳ್ಳಿ: "ವಕ್ಫ್ ಬೋರ್ಡ್ ಚುನಾವಣೆ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರ ಸಭೆ ಮಾಡಲಾಗಿದೆ. ವಕ್ಫ್ ಸಮಸ್ಯೆಗೂ ಇದಕ್ಕೂ ಸಂಬಂಧ ಇಲ್ಲ" ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಬುಧವಾರ ಸಭೆ ನಡೆಸಿ ಮಾತನಾಡಿದ ಅವರು, "ಇದೇ ತಿಂಗಳ 19ರಂದು ವಕ್ಫ್ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಡೆಸಿರುವ ಸಭೆಗೆ ಯಾವ ಮುಸ್ಲಿಂ ರೈತರೂ ಬಂದಿಲ್ಲ. ರೈತರು ಯಾರಾದರೇನು?. ಅವರಿಗೆ ನೋಟಿಸ್ ಕೊಟ್ಟಿದ್ದರೆ ನಾನು ಮತ್ತು ಸಿಎಂ ಹಿಂಪಡೆಯಲು ಸೂಚನೆ ನೀಡಿದ್ದೇವೆ. ಯಾವ ಕಾರಣಕ್ಕೂ ರೈತರಿಗೆ ತೊಂದರೆ ಕೊಡಲು ನಾನು ಸಿದ್ಧವಿಲ್ಲ. ರೈತರು ನಮ್ಮ ಅನ್ನದಾತರು, ತೊಂದರೆ ಕೊಡುವುದಿಲ್ಲ. ಧಾರವಾಡ ಜಿಲ್ಲೆಯ ಸಭೆ ಅಷ್ಟೇ ಇದು. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ನಾವು ಮಾಡುವ ಒಳ್ಳೆಯ ಕೆಲಸಗಳನ್ನು ನೋಡಿ ಅವರಿಗೆ ಸಹಿಸಲು ಆಗುತ್ತಿಲ್ಲ" ಎಂದು ಟೀಕಿಸಿದರು.
"ಮುಡಾ ತನಿಖೆಗೆ ಲೋಕಾಯುಕ್ತರು ಸಿದ್ದರಾಮಯ್ಯ ಅವರಿಗೆ ನೋಟಿಸ್ ಕೊಟ್ಟಿದ್ದಾರೆ, ಅವರು ಹೋಗಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಮುಡಾದಲ್ಲಿ ಸಿದ್ದರಾಮಯ್ಯನವರ ಪಾತ್ರ ಇಲ್ಲ. ಹೀಗಾಗಿ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ಆದರೆ ನ್ಯಾಯಾಲಯದ ಆದೇಶಕ್ಕೆ ನಾವೆಲ್ಲಾ ತಲೆಬಾಗಲೇ ಬೇಕು" ಎಂದರು.
"ಆರ್.ಅಶೋಕ್ ಮ್ಯಾಚ್ ಫಿಕ್ಸಿಂಗ್ ಅಂತಿದ್ದಾರೆ. ಏನು ಮ್ಯಾಚ್ ಫಿಕ್ಸಿಂಗ್ ಆಗಿದೆ?. ಬಿಜೆಪಿ ಕಾಲದಲ್ಲೂ ಬಹಳಷ್ಟು ಕೇಸ್ಗಳನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದಾರೆ. ಅವಾಗೆಲ್ಲ ಮ್ಯಾಚ್ ಫಿಕ್ಸಿಂಗ್ ಇತ್ತಾ?. 2019 ರಲ್ಲಿ ನನ್ನ ಕೇಸ್ನಲ್ಲೂ ಸಿಬಿಐ ಕರೆದಿದ್ದರು. ಅರ್ಧ ಗಂಟೆಯಲ್ಲಿ ಬಿಟ್ಟು ಕಳುಹಿಸಿದ್ದರು" ಎಂದು ತಮ್ಮ ಮೇಲೆ ನಡೆದಿದ್ದ ತನಿಖೆಯನ್ನು ಜಮೀರ್ ನೆನಪಿಸಿಕೊಂಡರು.
ಶಿಗ್ಗಾಂವಿ ಉಪಚುನಾವಣೆ: "ಉಪಚುನಾವಣೆಯ ಮೂರು ಕ್ಷೇತ್ರ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ಇದೆ. ಶಿಗ್ಗಾಂವಿಯಲ್ಲಿ ನಾನು ಪ್ರಚಾರ ಮಾಡಿದ್ದೇನೆ. ಸಿಎಂ ಪ್ರಚಾರ ಮಾಡಿದ ನಂತರ ಪರಿಸ್ಥಿತಿ ತುಂಬಾ ಚೆನ್ನಾಗಿದೆ. ನಾವು ಗೆದ್ದೇ ಗೆಲ್ಲುತ್ತೇವೆ" ಎಂದರು.
ಇದನ್ನೂ ಓದಿ: ವಕ್ಫ್ ಆಸ್ತಿ ಸುರಕ್ಷತೆಗಾಗಿ ರಾಜ್ಯ ಸರ್ಕಾರ ಈವರೆಗೆ ಬಿಡುಗಡೆ ಮಾಡಿದ ಅನುದಾನದ ವಿವರ