ವಾಶಿಂಗ್ಟನ್ ಡಿ.ಸಿ. (ಯು.ಎಸ್.ಎ): ಪಾಕಿಸ್ತಾನ ಪ್ರಾಯೋಜಿತ ಉಗ್ರರ ದಾಳಿಯಿಂದಾಗಿ ಕಾಶ್ಮೀರದ ಮುಸ್ಲಿಮರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಆದರೆ ಅವರ ಕಷ್ಟಗಳನ್ನು ಮಾಧ್ಯಮಗಳು ಮತ್ತು ಮಾನವ ಹಕ್ಕುಗಳ ಚಳುವಳಿದಾರರು ಕಡೆಗಣಿಸಿದ್ದಾರೆ ಎಂದು ಪತ್ರಕರ್ತೆ ಆರತಿ ಟಿಕೂ ಸಿಂಗ್ ಆರೋಪಿಸಿದ್ದಾರೆ.
ಅವರು ವಾಷಿಂಗ್ಟನ್ನಲ್ಲಿ ಅಮೆರಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಮ್ಮಿಕೊಂಡಿದ್ದ ಸಮಾಲೋಚನೆಯಲ್ಲಿ, ಕಳೆದ 30 ವರ್ಷಗಳಿಂದ ಪಾಕಿಸ್ತಾನಿ ಉಗ್ರರಿಂದ ತೊಂದರೆಗೆ ಒಳಗಾಗಿರುವ ಅಲ್ಲಿನ ಜನರ ಕುರಿತು ಕಳವಳ ವ್ಯಕ್ತಪಡಿಸಿದರು.
'ದಕ್ಷಿಣ ಏಷ್ಯಾದಲ್ಲಿ ಮಾನವ ಹಕ್ಕುಗಳು' ಎಂಬ ವಿಷಯದ ಕುರಿತು ಮಾತನಾಡುತ್ತಾ, ಪಾಕಿಸ್ತಾನಿ ಪ್ರಾಯೋಜಿತ ಉಗ್ರರು ಕಾಶ್ಮೀರದ ಅಮಾಯಕ ಜನರನ್ನು ಹತ್ಯೆ ಮಾಡುತ್ತಾರೆ. ಅದರಲ್ಲೂ ಕಾಶ್ಮೀರಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಉಗ್ರರ ದಾಳಿಯಿಂದಾಗಿ ಪ್ರಾಣ ತೆತ್ತಿದ್ದಾರೆ ಎಂದರು.
ಕಳೆದ 30 ವರ್ಷಗಳಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಇಸ್ಲಾಮಿಕ್ ಜಿಹಾದ್ ಹಾಗೂ ಉಗ್ರರ ಅಪರಾಧಗಳನ್ನು ಮಾಧ್ಯಮಗಳು ನಿರ್ಲಕ್ಷಿಸುತ್ತಿವೆ. ಹಲವು ಬಾರಿ ಮಾಧ್ಯಮಗಳು ವಾಸ್ತವತೆಯನ್ನು ಅರಿತುಕೊಳ್ಳದೇ, ಇತಿಹಾಸವನ್ನು ತಿಳಿದುಕೊಳ್ಳದೇ ವರದಿ ಮಾಡುತ್ತವೆ ಎಂದು ಆರ್ತಿ ಸಿಂಗ್ ನೇರವಾಗಿ ಆರೋಪಿಸಿದರು.
ಕಾಶ್ಮೀರದಲ್ಲಿ ಉಗ್ರರ ದಾಳಿಗೊಳಗಾದವರ ಪರವಾಗಿ ಧ್ವನಿ ಎತ್ತುವುದು ನಮ್ಮ ನೈತಿಕತೆ ಎಂದುಕೊಂಡು ಯಾವುದೇ ಮಾನವ ಹಕ್ಕುಗಳ ಸಂಘಟನೆ ಹಾಗೂ ಮಾಧ್ಯಮ ಕೆಲಸ ಮಾಡುತ್ತಿಲ್ಲ ಎಂದು ಕಟುವಾಗಿಯೆ ಟೀಕಿಸಿದರು.