ಪ್ರಾಕೃತಿಕ ವಿಕೋಪಗಳು ಯಾವಾಗ ಬೇಕಾದರೂ, ಹೇಗೆ ಬೇಕಾದರೂ ಸಂಭವಿಸಬಹುದು. ಈ ಪ್ರಾಕೃತಿಕ ವಿಕೋಪಗಳ ಬಗ್ಗೆ ಅದರಲ್ಲೂ ಮನುಕುಲಕ್ಕೆ ಹಾನಿ ಮಾಡುವ ಭೀಭತ್ಸ ಪಾಕೃತಿಕ ವಿಕೋಪಗಳ ಆಗಾಗ ನಡೆಯುತ್ತಿರುತ್ತವೆ. ಈಗ ಅಂಥದ್ದೊಂದು ಪ್ರಾಕೃತಿಕ ವಿಕೋಪದ ಸಂಭವಿಸುವ ಸಾಧ್ಯತೆಯನ್ನು ವಿಜ್ಞಾನಿಗಳು ಹೇಳುತ್ತಿದ್ದಾರೆ.
ಈ ಬಾರಿ ಪ್ರಾಕೃತಿಕ ವಿಕೋಪದ ಭೀತಿಯನ್ನು ಸೃಷ್ಟಿ ಮಾಡಿರುವುದು ಅಂಟಾರ್ಕ್ಟಿಕಾ. ಪಶ್ಚಿಮ ಅಂಟಾರ್ಕ್ಟಿಕಾದಲ್ಲಿರುವ ಹಿಮನದಿಯೊಂದು ಅನಾಹುತ ಸೃಷ್ಟಿಸುವ ಸಾಧ್ಯಯಿದೆಯಂತೆ. ಅಂದಹಾಗೆ, ಅದರ ಹೆಸರು ಥ್ವೈಟ್ಸ್. ಈ ಥ್ವೈಟ್ಸ್ ಹಿಮನದಿಯನ್ನು 'ಡೂಮ್ಸ್‌ಡೇ ಗ್ಲೇಸಿಯರ್ ' ಎಂದೂ ತಜ್ಞರು ಕರೆಯುತ್ತಾರೆ.
ಏನಿದು ಡೂಮ್ಸ್‌ಡೇ ಗ್ಲೇಸಿಯರ್?:
ಹಿಮನದಿಯೊಂದು ಯಾವ ರೀತಿ ಹಾನಿ ಮಾಡುತ್ತದೆ ಎಂಬುದನ್ನು, ಈ ಹಿಮನದಿ ಮಾಡಬಹುದಾದ ಅನಾಹುತಗಳ ಬಗ್ಗೆ ಗೊತ್ತಾಗಬೇಕಾದರೆ ತಜ್ಞರು ಈ ಹಿಮನದಿಗೆ ಡೂಮ್ಸ್‌ಡೇ ಗ್ಲೇಸಿಯರ್ ಎಂದು ಅನ್ವರ್ಥ ನಾಮದಿಂದ ಏಕೆ ಕರೆಯುತ್ತಾರೆ ಎಂದು ತಿಳಿದುಕೊಳ್ಳಬೇಕಿದೆ.
ಡೂಮ್ಸ್‌ಡೇ ಎಂದರೆ ಜಗತ್ತಿನ ಕೊನೆಯ ದಿನ, ಅಪಾಯದ ದಿನ ಎಂಬ ಅರ್ಥಗಳಿವೆ. ಥ್ವೈಟ್ಸ್ ಹಿಮನದಿಯ ಅನಾಹುತಗಳನ್ನು ಅರಿತುಕೊಂಡೇ ಆ ಹಿಮನದಿಗೆ ತಜ್ಞರು ಡೂಮ್ಸ್‌ಡೇ ಗ್ಲೇಸಿಯರ್ ಎಂದು ಕರೆದಿದ್ದಾರೇನೋ ಅನ್ನಿಸುತ್ತದೆ. ಅಂದಹಾಗೆ, ಥ್ವೈಟ್ಸ್ ಹಿಮನದಿಯಿಂದಾಗಿ ಜಗತ್ತೇನೂ ನಶಿಸುವುದಿಲ್ಲ. ಆದರೆ ಭಾರಿ ಅನಾಹುತ ಎದುರಾಗಬಹುದು ಎಂಬ ಅಭಿಮತ ತಜ್ಞರದ್ದು.
ಥ್ವೈಟ್ಸ್ ಹಿಮನದಿಯಿಂದ ಅವಾಂತರ ಹೇಗೆ?
ಭೂಮಿಯ ಮೇಲಿನ ಮಂಜುಗಡ್ಡೆಗಳು ಕರಗಿ, ನದಿಗಳ ಮುಖಾಂತರ ಸಾಗರವನ್ನು ಸೇರುವುದು ಹೊಸತೇನಲ್ಲ. ಅದು ನಮ್ಮ ದೇಶದ ಉತ್ತರದಲ್ಲಿರುವ ಹಿಮಾಲಯ ಪರ್ವತವೇ ಆಗಿರಲಿ ಅಥವಾ ಉತ್ತರ ಧ್ರುವ ಮಂಜುಗಡ್ಡೆಯೇ ಆಗಿರಲಿ. ಪ್ರತಿವರ್ಷ ಇಂತಿಷ್ಟು ಮಂಜುಗಡ್ಡೆ ನೀರಾಗಿ ಕರಗಿ ಸಾಗರ ಸೇರುವುದು ಸಾಮಾನ್ಯ ಪರಿಸರ ವ್ಯವಸ್ಥೆಯ ಲಕ್ಷಣ. ಆದರೆ, ಅದೇ ಮಂಜುಗಡ್ಡೆ ನೀರಾಗುವ ಪ್ರಮಾಣ ಹೆಚ್ಚಾದರೆ? ಆಗ ನಿಜವಾದ ಸಮಸ್ಯೆ ಉದ್ಭವವಾಗುತ್ತದೆ. ಇದೇ ಸನ್ನಿವೇಶ ಪಶ್ಚಿಮ ಅಂಟಾರ್ಕ್ಟಿಕಾದ ಥ್ವೈಟ್ಸ್ ಹಿಮನದಿಯಲ್ಲಿ ನಡೆಯುತ್ತಿದೆ.
ಹೌದು, ಥ್ವೈಟ್ಸ್ ಹಿಮನದಿ ಕರಗುವ ಪ್ರಮಾಣ ಹೆಚ್ಚಾಗುತ್ತಿದೆ. ಆ ಹಿಮನದಿಯಲ್ಲಿರುವ ಮಂಜುಗಡ್ಡೆ ಕರಗಿದರೆ ಸಾಗರದ ಮಟ್ಟ ಸುಮಾರು 65 ಸೆಂಟಿಮೀಟರ್ಗಳಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ. 1900ನೇ ಇಸವಿಯಿಂದ ಕರಗುತ್ತಿರುವ ಈ ಥ್ವೈಟ್ಸ್ ಹಿಮನದಿ ಕೆಲವು ದೇಶಗಳಲ್ಲಿ ಕಡಲಂಚಿನಲ್ಲಿ ವಾಸ ಮಾಡುವ ಜನರನ್ನು ಅಲ್ಲಿಂದ ತೆರವು ಮಾಡಿಸಿದೆ. ಇದರ ಜೊತೆಗೆ, ಪರಿಸರಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಉಂಟು ಮಾಡಿದೆ. ಇನ್ನು ಸಮುದ್ರಮಟ್ಟ 65 ಸೆಂಟಿ ಮೀಟರ್ಗಳಷ್ಟು ಏರಿಕೆಯಾದರೆ ಏನೇನು ಸಮಸ್ಯೆಗಳು ಉಂಟಾಗುತ್ತವೆ ಎಂದು ನೀವೇ ಊಹಿಸಿಕೊಳ್ಳಬಹುದು.
ಉಳಿದ ಮಂಜುಗಡ್ಡೆ ಕರಗಿದರೆ?
ಸರಿಸುಮಾರು ಗ್ರೇಟ್ ಬ್ರಿಟನ್‌ನಷ್ಟು ವಿಸ್ತೀರ್ಣ ಹೊಂದಿರುವ ಈ ಥ್ವೈಟ್ಸ್ ಹಿಮನದಿ ಸಮುದ್ರ ಮಟ್ಟ ಶೇಕಡಾ 4ರಷ್ಟು ಹೆಚ್ಚಳಕ್ಕೆ ಕಾರಣವಾಗಿದೆ. 2000ನೇ ಇಸವಿಯಿಂದ ಒಂದು ಸಾವಿರ ಶತಕೋಟಿ ಟನ್ಗಳಷ್ಟು ಮಂಜುಗಡ್ಡೆಯನ್ನು ದಕ್ಷಿಣ ಅಂಟಾರ್ಕ್ಟಿಕಾ ಸಾಗರಕ್ಕೆ ಸಮೀಪದಲ್ಲಿರುವ ಅಮುಂಡಸೇನ್ ಸಮುದ್ರವನ್ನು ಸೇರಿಸಿದೆ.
ಕಳೆದ ಮೂರು ದಶಕಗಳಿಂದ ಮಂಜುಗಡ್ಡೆ ಕರಗುವ ಮಟ್ಟ ತೀವ್ರವಾಗಿ ಹೆಚ್ಚುತ್ತಿದ್ದು, ಮೊದಲಿಗಿಂತ ಎರಡು ಪಟ್ಟು ನೀರು ಸಾಗರ ಸೇರಿದೆ ಎಂದು ತಿಳಿದುಬಂದಿದೆ. ಥ್ವೈಟ್ಸ್ ಹಿಮನದಿಯ ಉಳಿದ ಮಂಜುಗಡ್ಡೆ ಕರಗಿದರೆ, ಖಂಡಿತಾ ಎಲ್ಲಾ ರಾಷ್ಟ್ರಗಳಿಗೆ ಸಾಕಷ್ಟು ಹಾನಿಯಾಗಬಹುದು ಎಂದು ಹೇಳಲಾಗುತ್ತಿದೆ.
ಥ್ವೈಟ್ಸ್ ಹಿಮನದಿಯ ಜೊತೆಗೆ..
ಅಂಟಾರ್ಕ್ಟಿಕಾದಲ್ಲಿ ಥ್ವೈಟ್ಸ್ ಹಿಮನದಿ ಮಾತ್ರವಿಲ್ಲ. ಥ್ವೈಟ್ಸ್ ಹಿಮನದಿಯಂತೆ ಅನೇಕ ಹಿಮನದಿಗಳು ಇದ್ದು, ಥ್ವೈಟ್ಸ್ ಹಿಮನದಿ ಕರಗಿದಂತೆ ಅವೂ ಕೂಡಾ ಕರಗಲಿವೆ. ಪಶ್ಚಿಮ ಅಂಟಾರ್ಟಿಕಾದಲ್ಲಿಯೇ ಪೈನ್ ಐಲ್ಯಾಂಡ್ ಗ್ಲೇಸಿಯರ್ ಇದ್ದು, ಥ್ವೈಟ್ಸ್ ಹಿಮನದಿ ಕರಗುವ ಪರಿಣಾಮದಿಂದಲೇ ಕರಗಲು ಆರಂಭಿಸುತ್ತದೆ. ಈ ಮೂಲಕ ಅಗಾಧ ಪ್ರಮಾಣದ ನೀರು ಸಮುದ್ರಕ್ಕೆ ಸೇರಲಿದೆ.
ಈ ಮೂಲಕ ಥ್ವೈಟ್ಸ್ ಹಿಮನದಿ ಕರಗಿದರೆ ವಿವಿಧ ರಾಷ್ಟ್ರಗಳ ಕರಾವಳಿಗಳ ಮೇಲೆ ಪರಿಣಾಮ ಬೀರಬಹುದು. ಅದನ್ನು ಸಮರ್ಥವಾಗಿ ಎದುರಿಸಬಹುದು ಎಂಬ ಲೆಕ್ಕಾಚಾರ ತಲೆಕೆಳಗಾಗಿದೆ. ಒಟ್ಟಾರೆಯಾಗಿ ಥ್ವೈಟ್ಸ್ ಹಿಮನದಿ ಕರಗುವುದರಿಂದ ಆಗುವ ದುಷ್ಪರಿಣಾಮಗಳೇನು? ಅತ್ಯಂತ ಪ್ರಮುಖ ದುಷ್ಪರಿಣಾಮಗಳು ಇಲ್ಲಿವೆ..
- ಜಗತ್ತಿನ ದ್ವೀಪಗಳು, ದ್ವೀಪ ದೇಶಗಳ ಮೇಲೆ ಭಾರಿ ಪರಿಣಾಮ ಉಂಟಾಗಬಹುದು
- ಮುಂಬೈ, ಶಾಂಘೈ, ನ್ಯೂಯಾರ್ಕ್, ಮಿಯಾಮಿ, ಟೋಕಿಯೋ ಮುಳುಗಡೆಯಾಬಹುದು
- ಸಾಗರದ ಜೀವಿ ವೈವಿಧ್ಯತೆ ಮೇಲೆ ನೀರಿನ ಹೆಚ್ಚಳದಿಂದಾಗಿ ಅಸಮತೋಲನ
- ಮಂಜುಗಡ್ಡೆ ಬೇಗನೇ ಕರ ನೀರಾಗುವುದರಿಂದ ಜಾಗತಿಕ ತಾಪಮಾನ ಹೆಚ್ಚಳ
- ಮಂಜುಡ್ಡೆಯನ್ನೇ ಆವಾಸಸ್ಥಾನವಾಗಿರುವ ಪೆಂಗ್ವಿನ್, ಹಿಮಕರಡಿಯಂಥ ಪ್ರಾಣಿಗಳ ಅವನತಿ
- ಉಪ್ಪು ನೀರಿನ ಹೆಚ್ಚಳದಿಂದ ಸಮುದ್ರದ ದಡ ಪ್ರದೇಶಗಳಲ್ಲಿ ಫಲವತ್ತತೆಯ ನಾಶ
- ಸಮುದ್ರ ಕೊರೆತ, ಕರಾವಳಿಯ ಜೀವ ವೈವಿಧ್ಯದ ಮೇಲೆ ಪ್ರತಿಕೂಲ ಪರಿಣಾಮ
32 ವಿಜ್ಞಾನಿಗಳ ತಂಡದಿಂದ ಸಂಶೋಧನೆ:
ಥ್ವೈಟ್ಸ್ ಹಿಮನದಿ ಹೇಗೆ ಕರಗುತ್ತದೆ?, ಕರಗುವುದನ್ನು ತಪ್ಪಿಸಲು ಯಾವುದಾದರೂ ಕ್ರಮಗಳನ್ನು ತೆಗೆದುಕೊಳ್ಳಬಹುದು?, ಹಿಮ ನದಿ ಕರಗಿದರೆ ಯಾವ ಅಪಾಯ ಉಂಟಾಗುತ್ತದೆ ಎಂಬುದನ್ನು ಅಧ್ಯಯನ ಮಾಡಲು ಸುಮಾರು 32 ಮಂದಿ ವಿಜ್ಞಾನಿಗಳ ತಂಡ ಹೊರಟಿದ್ದು ಗುರುವಾರದಿಂದ ಸಂಶೋಧನೆಯಲ್ಲಿ ತೊಡಗಿಕೊಳ್ಳಲಿದೆ.
ಸುಮಾರು 50 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ಈ ಸಂಶೋಧನೆಗೆ ವಿನಿಯೋಗಿಸಲಾಗಿದ್ದು, ಸುಮಾರು ಎರಡು ತಿಂಗಳ ಕಾಲ ಈ ಸಂಶೋಧನೆ ನಡೆಯಲಿದೆ. ಅಮೆರಿಕ ಮತ್ತು ಇಂಗ್ಲೆಂಡ್ ತಜ್ಞರು ಈ ತಂಡದಲ್ಲಿದ್ದಾರೆ.
ಈ ಪ್ರಾಕೃತಿಕ ವಿಕೋಪಗಳ ಬಗ್ಗೆ ಬಹುತೇಕ ಧರ್ಮಗಳ ನಂಬಿಕೆಗಳು ಒಂದೊಂದು ರೀತಿಯಲ್ಲಿ ಹೇಳುತ್ತವೆ. ಅಷ್ಟು ಮಾತ್ರವಲ್ಲದೇ, ಹಲವರು ಪ್ರಾಕೃತಿಕ ವಿಕೋಪಗಳಿಂದ ಜಗತ್ತು ಅಂತ್ಯವಾಗಬಹುದು ಎಂಬ ಭವಿಷ್ಯ ನುಡಿದ್ದಾರೆ. ಸಾಕಷ್ಟು ಮಂದಿ ಬಗ್ಗೆ ಈಗಲೂ ಮಯನ್ ಕ್ಯಾಲೆಂಡರ್ನತ್ತ ಬೆರಳು ಮಾಡಿ ತೋರಿಸುತ್ತಾರೆ. ಈ ಡೂಮ್ಸ್‌ಡೇ ಗ್ಲೇಸಿಯರ್ ಯಾವ ಅಪಾಯ ತರಲಿದೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ಭೂಮಿಯ ಆಳದಲ್ಲಿದೆ 4.5 ಬಿಲಿಯನ್ ವರ್ಷಗಳ ಹಿಂದಿನ ರಾಸಾಯನಿಕ: ಅಧ್ಯಯನ