ಬೋಸ್ಟನ್(ಯುಎಸ್ಎ): ದದ್ದುಗಳು( rashes) ಸೇರಿದಂತೆ ಕೆಲ ಚರ್ಮದ ಮೇಲಾಗುವ ಬದಲಾವಣೆಗಳು ಕೂಡಾ ಕೋವಿಡ್ನ ಲಕ್ಷಣವಾಗಿರಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಅಮೆರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಮತ್ತು ಇಂಟರ್ನ್ಯಾಷನಲ್ ಲೀಗ್ ಆಫ್ ಡರ್ಮಟಲಾಜಿಕ್ ಸೊಸೈಟಿಯ ಸಹಯೋಗದೊಂದಿಗೆ, ಮ್ಯಾಸಚೂಸೆಟ್ಸ್ ಜನರಲ್ ಹಾಸ್ಪಿಟಲ್ (MGH) ಮತ್ತು ಹಾರ್ವರ್ಡ್ ಮೆಡಿಕಲ್ ಸ್ಕೂಲ್ (HMS) ಸಂಶೋಧಕರು, ಕೊರೊನಾ ವೈರಸ್ ಸೋಂಕಿಗೆ ಸಂಬಂಧಿಸಿದ ಹೊಸ ಚರ್ಮರೋಗದ ಲಕ್ಷಣಗಳನ್ನು ವಿವರಿಸಿದ್ದಾರೆ.
ಒಂದು ನಿರ್ದಿಷ್ಟ ದದ್ದುವಿನಿಂದ ಕೋವಿಡ್ -19 ಬರುತ್ತದೆ ಎಂದು ನಾವು ಹೇಳುತ್ತಿಲ್ಲ. ವಿವಿಧ ರೀತಿಯ ದದ್ದುಗಳು ಕಾಣಿಸಿಕೊಳ್ಳಬಹುದು ಎಂದು ಪ್ರಮುಖ ಸಂಶೋಧಕ ಎಸ್ತರ್ ಇ. ಫ್ರೀಮನ್ ಅಧಿಕೃತ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.
ಕೋವಿಡ್ ರೋಗಿಗಳಲ್ಲಿ ಹೊಸದಾಗಿ ಪ್ರಾರಂಭವಾದ ಚರ್ಮರೋಗದ ರೋಗಲಕ್ಷಣಗಳಿರುವ 716 ಪ್ರಕರಣಗಳ ಬಗ್ಗೆ ಸಂಶೋಧಕರು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ. ಇದರಲ್ಲಿ ಪ್ರಯೋಗಾಲಯ ಪರೀಕ್ಷೆಯೊಂದಿಗೆ ದೃಢಪಟ್ಟ ಕೊರೊನಾ ಪಾಸಿಟಿವ್ ಇರುವ 171 ರೋಗಿಗಳು ಸೇರಿದ್ದಾರೆ.
ಗಂಟಲ ದ್ರವ ಪರೀಕ್ಷೆ ಮೂಲಕ ಕೋವಿಡ್ ದೃಢವಾದ ರೋಗಿಗಳಲ್ಲಿ, ಸಾಮಾನ್ಯ ಚರ್ಮದ ಲಕ್ಷಣವು ದಡಾರ(ಮಾರ್ಬಿಲಿಫಾರ್ಮ್) ಲಕ್ಷಣದಂತಹ ದದ್ದು ಎಂದು ಕಂಡು ಬಂದಿದೆ. ಇದು ಶೇ. 22ರಷ್ಟು ರೋಗಿಗಳಲ್ಲಿ ಕಂಡು ಬಂದಿದೆ. ಸಾಮಾನ್ಯವಾಗಿ ಮಧ್ಯಮ ಪ್ರಮಾಣದ ಸೋಂಕು ಇರುವವರಲ್ಲಿ ಇದು ಕಂಡು ಬರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಕೊರೊನಾ ರೋಗಿಗಳಲ್ಲಿ ಕಂಡು ಬರುವ ಮತ್ತೊಂದು ಸಾಮಾನ್ಯ ಲಕ್ಷಣವೆಂದರೆ, ಕಾಲ್ಬೆರಳುಗಳು, ಹಿಮ್ಮಡಿಗಳು ಅಥವಾ ಬೆರಳುಗಳ ಮೇಲೆ ಕೆಂಪು ಅಥವಾ ನೇರಳೆ ಚರ್ಮ ಸೃಷ್ಟಿಯಾಗುವುದು. ತುರಿಕೆ ಇರುವ ಉಬ್ಬುಗಳು ಬೆರಳುಗಳಲ್ಲಿ ಸೃಷ್ಟಿಯಾಗುತ್ತದೆ. ಚರ್ಮವು ತಂಪಾದ ಗಾಳಿ ಅಥವಾ ಬೆಳಕಿನತ್ತ ಒಗ್ಗಿಕೊಂಡಾಗ ಈ ಲಕ್ಷಣ ಸಾಮಾನ್ಯವಾಗಿ ಕಂಡು ಬರುತ್ತದೆ. ಸದ್ಯ ಇಂತಹ ಲಕ್ಷಣಗಳು ಶೇ.18ರಷ್ಟು ರೋಗಿಗಳಲ್ಲಿ ಕಂಡು ಬಂದಿದೆ ಮತ್ತು ಇದು ಸಾಮಾನ್ಯವಾಗಿ ಮಧ್ಯಮ ಸೋಂಕಿನ ಲಕ್ಷಣವಿರುವವರಲ್ಲಿ ಪತ್ತೆಯಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ.