ವಾಷಿಂಗ್ಟನ್ (ಯುಎಸ್): ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ಬಗ್ಗೆ ಮಧ್ಯಸ್ಥಿಕೆ ವಹಿಸುವ ಪ್ರಸ್ತಾಪವನ್ನು ಪುನರುಚ್ಚರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.
ಶ್ವೇತಭವನದ ಓವಲ್ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಟ್ರಂಪ್, ಭಾರತ ಮತ್ತು ಚೀನಾ ನಡುವೆ ದೊಡ್ಡ ಸಂಘರ್ಷ ನಡೆಯುತ್ತಿದೆ ಎಂದರು.
"ಭಾರತದವರು ನನ್ನನ್ನು ಇಷ್ಟಪಡುತ್ತಾರೆ. ಈ ದೇಶದಲ್ಲಿ ಮಾಧ್ಯಮಗಳು ನನ್ನನ್ನು ಇಷ್ಟಪಡುವುದಕ್ಕಿಂತ ಹೆಚ್ಚು ಭಾರತದಲ್ಲಿ ನನ್ನನ್ನು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾನು ಮೋದಿಯನ್ನು ಇಷ್ಟಪಡುತ್ತೇನೆ. ಅವರು ಒಬ್ಬ ಮಹಾನ್ ವ್ಯಕ್ತಿ" ಎಂದು ಟ್ರಂಪ್ ಹೇಳಿದರು.
"ಭಾರತ ಮತ್ತು ಚೀನಾದ ನಡುವೆ ದೊಡ್ಡ ಸಂಘರ್ಷವಿದೆ. 1.4 ಶತಕೋಟಿ ಜನರಿರುವ ಈ ಎರಡು ದೇಶಗಳು ಅತ್ಯಂತ ಶಕ್ತಿಶಾಲಿ ಮಿಲಿಟರಿಗಳನ್ನು ಹೊಂದಿರುವ ಎರಡು ದೇಶಗಳಾಗಿವೆ" ಎಂದರು.
"ನಾನು ಪ್ರಧಾನಿ ಮೋದಿ ಅವರೊಂದಿಗೆ ಈ ಕುರಿತಾಗಿ ಮಾತನಾಡಿದ್ದೇನೆ. ಚೀನಾದೊಂದಿಗೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಹೇಳಲು ಅವರು ಉತ್ತಮ ಮನಸ್ಥಿತಿಯಲ್ಲಿಲ್ಲ" ಎಂದು ಟ್ರಂಪ್ ಹೇಳಿದ್ದಾರೆ.
ಭಾರತ ಸಹಾಯ ಬಯಸಿದರೆ, ಮಧ್ಯಸ್ಥಿಕೆ ವಹಿಸಲು ಅಮೆರಿಕ ಸಿದ್ಧವಿದೆ ಎಂದು ಟ್ರಂಪ್ ಹೇಳಿದ್ದಾರೆ.