ನ್ಯೂಯಾರ್ಕ್ : ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ನಗರದ ಪ್ರಸಿದ್ದ ಟೈಮ್ಸ್ ಸ್ಕ್ವೇರ್ನಲ್ಲಿ ಸುಮಾರು 3,000 ಮಂದಿ ಯೋಗಾಭ್ಯಾಸ ಮಾಡಿದರು. ಭಾರತದ ಕಾನ್ಸುಲೇಟ್ ಜನರಲ್ ಮತ್ತು ಟೈಮ್ಸ್ ಸ್ಕ್ವೇರ್ ಜಂಟಿ ಸಹಭಾಗಿತ್ವದಲ್ಲಿ 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯೋಜಿಸಲಾಗಿತ್ತು.
ಪ್ರತಿ ವರ್ಷ ಯೋಗ ದಿನದಂದು ಟೈಮ್ಸ್ ಸ್ಕ್ವೇರ್ನಲ್ಲಿ ಅತ್ಯಂತ ಉತ್ಸಾಹದಿಂದ ಯೋಗಭ್ಯಾಸ ಮಾಡಲಾಗುತ್ತದೆ. ಕೋವಿಡ್ ನಿಯಂತ್ರಣಕ್ಕೆ ಬಂದು ನ್ಯೂಯಾರ್ಕ್ ನಗರ ಸಹಜ ಸ್ಥಿತಿಗೆ ತಲುಪಿದ ಬಳಿಕ ಮೊದಲ ಪ್ರಮುಖ ಕಾರ್ಯಕ್ರಮ ಇದಾಗಿತ್ತು. ಜನರು ಯೋಗದ ವಿವಿಧ ಆಸನಗಳು ಮತ್ತು ಧ್ಯಾನ ಮಾಡಿ ರಿಲ್ಯಾಕ್ಸ್ ಆದರು.
ಕೋವಿಡ್ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಂಡು ಯೋಗ ಮ್ಯಾಟ್ಗಳನ್ನು ಹಾಕಲಾಗಿತ್ತು. ವಿವಿಧ ದೇಶಗಳ ಜನರು ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಾರ್ವಜನಿಕರು, ವಿಶೇಷವಾಗಿ ಪ್ರವಾಸಿಗರ ವೀಕ್ಷಣೆಗಾಗಿ ಬೃಹತ್ ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿತ್ತು.
ನಾವು ಜಗತ್ತಿನ ವಿವಿಧೆಡೆಗಳಲ್ಲಿ ಯೋಗ ದಿನಾಚರಣೆ ಆಚರಿಸುತ್ತಿದ್ದರೂ, ಟೈಮ್ಸ್ ಸ್ಕ್ವೇರ್ನಲ್ಲಿ ಯೋಗ ದಿನ ಆಚರಿಸುತ್ತಿರುವುದು ವಿಶೇಷವಾಗಿದೆ. ಯೋಗ ಸಾರ್ವತ್ರಿಕ ಆಚರಣೆ ಎಂಬುವುದನ್ನು ಸಾರಲು ಟೈಮ್ಸ್ ಸ್ಕ್ವೇರ್ ಗಿಂತ ಉತ್ತಮ ಸ್ಥಳ ಬೇರೊಂದಿಲ್ಲ. ಇದು ವಿಶ್ವದ ಕ್ರಾಸ್ ರೋಡ್ ಆಗಿದೆ ಎಂದು ಭಾರತೀಯ ಕಾನ್ಸುಲೇಟ್ ಜನರಲ್ ರಂದೀರ್ ಜೈಸ್ವಾಲ್ ಕಾರ್ಯಕ್ರಮವನ್ನು ಉದ್ದೇಶಿಸಿ ಹೇಳಿದರು.
ಓದಿ : ಆನ್ಲೈನ್ ಯೋಗ ತರಬೇತಿ ಕೇಂದ್ರವಾದ ಮೈಸೂರು; ವಿದೇಶಿಯರಿಗೂ ಅಚ್ಚುಮೆಚ್ಚು