ಸ್ಯಾನ್ ಡಿಯಾಗೋ(ಅಮೆರಿಕ): ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ತೋರುತ್ತಿದ್ದಾರೆ. ಸೇನೆ ಮತ್ತು ರಕ್ಷಣೆ ವಿಚಾರದಲ್ಲೂ ಅವರು ಮುಂದಿದ್ದಾರೆ. ಈಗ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದ ಯುಎಸ್ಎಸ್ ಅಬ್ರಹಾಂ ಲಿಂಕನ್ ಮಹಿಳೆಯೊಬ್ಬರು ಕಮಾಂಡರ್ ಆಗಿ ನೇಮಕಗೊಂಡು, ದಾಖಲೆ ಬರೆದಿದ್ದಾರೆ. ಅವರ ಹೆಸರು ಕ್ಯಾಪ್ಟನ್ ಆ್ಯಮಿ ಬೌರ್ನ್‌ಸ್ಮಿಡ್ಟ್ .
ಅಂದಹಾಗೆ ಯುಎಸ್ಎಸ್ ಅಬ್ರಹಾಂ ಲಿಂಕನ್ ಅಮೆರಿಕದಲ್ಲಿರುವ ಪರಮಾಣು ಸಾಗಿಸುವ ಶಿಪ್ ( ಯುಎಸ್ಎಸ್ ಎಂದರೆ ಯುನೈಟೆಡ್ ಸ್ಟೇಟ್ಸ್ ಶಿಪ್ ಎಂದರ್ಥ). ಅಮೆರಿಕದ ಸ್ಯಾನ್ ಡಿಯಾಗೋದಲ್ಲಿ ಈ ಶಿಪ್ ಅನ್ನು ನಿಯೋಜನೆ ಮಾಡಲಾಗಿದ್ದು, ಇದರ ಸಂಪೂರ್ಣ ಉಸ್ತುವಾರಿಯನ್ನು ಆ್ಯಮಿ ಬೌರ್ನ್ಸ್ಮಿಡ್ತ್ ವಹಿಸಿಕೊಳ್ಳಲಿದ್ದಾರೆ. ಅಂದಹಾಗೆ ಇದು ಅಮೆರಿಕದ ಇತಿಹಾಸದಲ್ಲೇ ಮೊದಲ ಬಾರಿ, ಪರಮಾಣು ಕ್ಯಾರಿಯರ್ ಅಂದರೆ ಸಾಗಿಸುವ ಶಿಪ್ನ ಉಸ್ತುವಾರಿಯನ್ನು ಮಹಿಳೆಯೊಬ್ಬರು ವಹಿಸಿಕೊಳ್ಳುತ್ತಿದ್ದಾರೆ.
ಕ್ಯಾಪ್ಟನ್ ಆ್ಯಮಿ ಬೌರ್ನ್‌ಸ್ಮಿಡ್ಟ್ ಈ ಮೊದಲು ಅಂದರೆ 2016ರಿಂದ 2019ರವರೆಗೆ ಯುಎಸ್ಎಸ್ ಅಬ್ರಹಾಂ ಲಿಂಕನ್ ಎಕ್ಸಿಕ್ಯೂಟಿವ್ ಆಫಿಸರ್ ಆಗಿ ಕೆಲಸ ನಿರ್ವಹಣೆ ಮಾಡಿದ್ದರು. ಕ್ಯಾಪ್ಟನ್ ವಾಲ್ಟ್ ಸ್ಲಾಟರ್ ಅವರಿಂದ ಕಳೆದ ಆಗಸ್ಟ್ನಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದ್ದ ಕ್ಯಾಪ್ಟನ್ ಆ್ಯಮಿ ಬೌರ್ನ್‌ಸ್ಮಿಡ್ಟ್ ಸೋಮವಾರ ಸ್ಯಾನ್ಡಿಯಾಗೋದಲ್ಲಿ ನಿಯೋಜನೆ ಮಾಡಿದ್ದ ಶಿಪ್ಗೆ ಕಮಾಂಡರ್ ಆಗಿ ದಾಖಲೆ ನಿರ್ಮಿಸಿದ್ದಾರೆ.
ರಾಷ್ಟ್ರ ರಕ್ಷಣೆ ಜವಾಬ್ದಾರಿ ಮಹಿಳೆ ಹೆಗಲಿಗೆ
ನಮ್ಮ ರಾಷ್ಟ್ರವನ್ನು ರಕ್ಷಿಸಲು ಜವಾಬ್ದಾರಿಯನ್ನು ವಹಿಸಲಾಗಿದೆ ಎಂಬುದಕ್ಕಿಂತ ಖುಷಿಯ ವಿಚಾರ ಬೇರೊಂದು ಇಲ್ಲ ಎಂದು ಆ್ಯಮಿ ಬೌರ್ನ್‌ಸ್ಮಿಡ್ಟ್ ಅಭಿಪ್ರಾಯಪಟ್ಟಿದ್ದಾರೆ. ಇದರ ಜೊತೆಗೆ ಕ್ಯಾಪ್ಟನ್ ಸ್ಲಾಟರ್ ಅವರಿಗೆ ಬೌರ್ನ್‌ಸ್ಮಿಡ್ಟ್ ಧನ್ಯವಾದ ಅರ್ಪಿಸಿದ್ದಾರೆ ಎಂದು ನೌಕಾಪಡೆಯ ಉಲ್ಲೇಖಿಸಿದೆ.
ಬೌರ್ನ್‌ಸ್ಮಿಡ್ಟ್ ಅವರು ಅಬ್ರಹಾಂ ಲಿಂಕನ್ ಶಿಪ್ನ ಎಕ್ಸಿಕ್ಯೂಟಿವ್ ಆಫೀಸರ್ ಮಾತ್ರವಲ್ಲದೇ ಹೆಲಿಕಾಪ್ಟರ್ ಮ್ಯಾರಿಟೈಮ್ ಸ್ಟ್ರೈಕ್ ಸ್ಕ್ವಾಡ್ರನ್ನ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಅವರು ತಮ್ಮ ವೃತ್ತಿಜೀವನದಲ್ಲಿ 3 ಸಾವಿರಕ್ಕೂ ಹೆಚ್ಚು ಗಂಟೆಗಳ ಕಾಲ ಶಿಪ್ನಲ್ಲಿ ಕಳೆದಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
ಅಮೆರಿಕದ ನೌಕಾಪಡೆಯಲ್ಲಿ 1974ರಲ್ಲಿ ಮೊದಲ ಮಹಿಳೆಯರನ್ನು ನೇಮಕ ಮಾಡಲಾಗಿತ್ತು. ಅವರನ್ನು ಏವಿಯೇಟರ್ ಎಂಬ ಹುದ್ದೆಯಲ್ಲಿ ಗುರ್ತಿಸಲಾಗಿತ್ತು. 1994ರಲ್ಲಿ ಯುಎಸ್ಎಸ್ ಡ್ವೈಟ್ ಡಿ ಐಸೆನ್‌ಹೋವರ್ ಎಂಬ ಯುದ್ಧ ಹಡಗಿಗೆ ಮಹಿಳೆಯರನ್ನು ಮೊದಲು ನಿಯೋಜಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ಜಪಾನ್ ಸಮುದ್ರದ ಮೇಲೆ ಗುರುತಿಸಲಾರದ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ