ವಾಷಿಂಗ್ಟನ್(ಅಮೆರಿಕ): ಅಮೆರಿಕದ ಐದು ಟಾಪ್ ಕಂಪನಿಗಳ ಸಿಇಒಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಒನ್-ಒ-ಒನ್ (One-O-One ) ಸಭೆ ನಡೆಸಲಿದ್ದಾರೆ. ಐವರಲ್ಲಿ ಇಬ್ಬರು ಭಾರತೀಯ - ಅಮೆರಿಕನ್ನರಾಗಿದ್ದಾರೆ. ಅಡೋಬ್ ಕಂಪನಿಯಿಂದ ಶಾಂತನು ನಾರಾಯಣ್ ಮತ್ತು ಜನರಲ್ ಅಟೋಮಿಕ್ಸ್ ಕಂಪನಿಯ ವಿವೇಕ್ ಲಾಲ್ ಭಾರತೀಯ ಮೂಲದವರಾಗಿದ್ದಾರೆ.
ಕ್ವಾಲ್ಕಾಮ್ ಕಂಪನಿಯಿಂದ ಕ್ರಿಸ್ಟಿಯಾನೋ ಇ ಅಮೋನ್, ಫಸ್ಟ್ ಸೋಲಾರ್ನಿಂದ ಮಾರ್ಕ್ ವಿಡ್ಮಾರ್ ಮತ್ತು ಬ್ಲ್ಯಾಕ್ ಸ್ಟೋನ್ ಕಂಪನಿಯಿಂದ ಸ್ಟೀಫನ್ ಎ ಶ್ವಾರ್ಜ್‌ಮನ್ ಸಹ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಭಾರತದ ಆದ್ಯತೆಗಳ ಪ್ರತಿಬಿಂಬ
ಭಾರತದಲ್ಲಿ ಹೂಡಿಕೆಗಳಿಗಿರುವ ಅವಕಾಶಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಅಮೆರಿಕದ ಪ್ರಮುಖ ಸಿಇಒಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಅಮೆರಿಕದ ವಿವಿಧ ಪ್ರದೇಶಗಳ ಐವರು ಸಿಇಒಗಳೊಂದಿಗಿನ ಭೇಟಿ ಸರ್ಕಾರದ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ.
ಐಟಿ, ಡಿಜಿಟಲ್ಗೆ ಸಂಬಂಧಿಸಿದಂತೆ ನಾರಾಯಣ್ ಜತೆ ಪ್ರಧಾನಿ ಮೋದಿ ಚರ್ಚಿಸಲಿದ್ದಾರೆ. ವಿವೇಕ್ ಲಾಲ್ ಜತೆಗಿನ ಮೋದಿ ಸಭೆ ಮಹತ್ವದ್ದಾಗಿದೆ. ಲಾಲ್ ಕಂಪನಿ, ಜನರಲ್ ಅಟೊಮಿಕ್ಸ್ ಮಿಲಿಟರಿ ಡ್ರೋನ್ ತಂತ್ರಜ್ಞಾನಗಳಲ್ಲಿ ಪ್ರವರ್ತಕ ಮಾತ್ರವಲ್ಲದೆ, ವಿಶ್ವದ ಅತ್ಯಾಧುನಿಕ ಮಿಲಿಟರಿ ಡ್ರೋನ್ ತಯಾರಿ ಮಾಡಲಿದೆ. ಭಾರತವು ಸಶಸ್ತ್ರ ಪಡೆಗಳ ಮೂರು ಶಾಖೆಗಳಿಗೆ ಹೆಚ್ಚಿನ ಡ್ರೋನ್ಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿದೆ.
ವಿವೇಕ್ ಲಾಲ್ ಜತೆಗೆ ಮಹತ್ವದ ಮಾತುಕತೆ
ಜಕಾರ್ತದಲ್ಲಿ ಜನಿಸಿದ ವಿವೇಕ್ ಲಾಲ್, ಈಗ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಇವರು ಸುಮಾರು 10 ವರ್ಷಗಳಿಂದ 18 ಶತಕೋಟಿ ಡಾಲರ್ ಮೌಲ್ಯದ ಪ್ರಮುಖ ದ್ವಿಪಕ್ಷೀಯ ರಕ್ಷಣಾ ಒಪ್ಪಂದಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತ ಮತ್ತು ಅಮೆರಿಕ ಹೊಸ ಸಂಬಂಧಕ್ಕೆ ರಕ್ಷಣಾ ವ್ಯಾಪಾರವು ಪ್ರಮುಖ ಆಧಾರಸ್ತಂಭವಾಗಿದೆ.
ಕ್ರಿಸ್ಟಿಯಾನೋ ಅಮೋನ್ ಜತೆಗೆ ಮೋದಿ ಸಭೆ ನಡೆಸಲಿದ್ದು, 5 ಜಿ ತಂತ್ರಜ್ಞಾನ ಕುರಿತಂತೆ ಮಾತುಕತೆ ನಡೆಸಲಿದ್ದಾರೆ. ಸ್ಯಾನ್ ಡಿಯಾಗೋ ಮೂಲದ ಕಂಪನಿ ಸೆಮಿಕಂಡಕ್ಟರ್‌ಗಳು, ಸಾಫ್ಟ್‌ವೇರ್ ಮತ್ತು ವೈರ್‌ಲೆಸ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸೇವೆಗಳನ್ನು ಒದಗಿಸುತ್ತದೆ.
ಮಹತ್ವ ಪಡೆದುಕೊಂಡ ಮಾರ್ಕ್ ವಿದ್ಮಾರ್ ಜತೆಗಿನ ಸಮಾಲೋಚನೆ
3G, 4G, ಮತ್ತು ವೈರ್‌ಲೆಸ್ ತಂತ್ರಜ್ಞಾನದ ಆವಿಷ್ಕಾರಗಳಲ್ಲಿ 30 ವರ್ಷಗಳಿಗಿಂತಲೂ ಮುಂಚೂಣಿಯಲ್ಲಿರುವ ಕ್ವಾಲ್ಕಾಮ್ ಈಗ 5G ಗೆ ತನ್ನ ಮಾರ್ಗವನ್ನು ವಿಸ್ತರಿಸುತ್ತಿದೆ. ಭಾರತವು ತನ್ನ ಶಕ್ತಿಯ ಅಗತ್ಯಗಳನ್ನು ಪೂರೈಸಲು ಸೌರಶಕ್ತಿಯ ಬಳಕೆಯಲ್ಲಿ ಬೃಹತ್ ಹೆಜ್ಜೆಗಳನ್ನು ಇಡುತ್ತಿರುವುದರಿಂದ, ಮಾರ್ಕ್ ವಿದ್ಮಾರ್ ಅವರೊಂದಿಗಿನ ಭೇಟಿಯು ಮಹತ್ವದ್ದಾಗಿದೆ.
ಏಕೆಂದರೆ ಮೊದಲ ಸೋಲಾರ್ ಸಮಗ್ರವಾದ ದ್ಯುತಿವಿದ್ಯುಜ್ಜನಕ (ಪಿವಿ) ಸೌರ ಪರಿಹಾರಗಳ ಪ್ರಮುಖ ಜಾಗತಿಕ ಪೂರೈಕೆದಾರನಾಗಿದ್ದು, ಅದರ ಮುಂದುವರಿದ ಮಾಡ್ಯೂಲ್ ಮತ್ತು ಸಿಸ್ಟಮ್ ತಂತ್ರಜ್ಞಾನವನ್ನು ಬಳಸುತ್ತದೆ.
ಇದನ್ನೂ ಓದಿ: ಅಮೆರಿಕದಲ್ಲಿ ಮೋದಿಗೆ ಅದ್ಧೂರಿ ಸ್ವಾಗತ.. ಇಂದು ಬೈಡನ್ - ಹ್ಯಾರಿಸ್ ಜತೆ ನಮೋ ಚರ್ಚೆ
ಸ್ಟೀಫನ್ ಎ. ಶ್ವಾರ್ಜ್‌ಮನ್ ಪಿಂಚಣಿ ನಿಧಿಗಳು, ದೊಡ್ಡ ಸಂಸ್ಥೆಗಳು ಮತ್ತು ವ್ಯಕ್ತಿಗಳ ಪರವಾಗಿ ಬಂಡವಾಳ ಹೂಡಿಕೆ ಮಾಡುವ ವಿಶ್ವದ ಪ್ರಮುಖ ಹೂಡಿಕೆ ಸಂಸ್ಥೆಗಳಲ್ಲಿ ಒಂದಾದ ಬ್ಲ್ಯಾಕ್‌ಸ್ಟೋನ್‌ನ ಅಧ್ಯಕ್ಷ, ಸಿಇಒ ಮತ್ತು ಸಹ - ಸಂಸ್ಥಾಪಕರಾಗಿದ್ದಾರೆ. ಇವರೊಂದಿಗೂ ಮೋದಿ ಸಂವಾದ ನಡೆಸಲಿದ್ದಾರೆ.
ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ‘ಮುಂದಿನ ಎರಡು ದಿನಗಳಲ್ಲಿ ಅಧ್ಯಕ್ಷ ಜೋ ಬೈಡನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್, ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಅವರನ್ನು ಭೇಟಿ ಮಾಡಲಾಗುವುದು‘ ಎಂದು ಟ್ವೀಟ್ ಮಾಡಿದ್ದಾರೆ.