ವಾಷಿಂಗ್ಟನ್: ಲಾಕ್ಹೀಡ್ ಮಾರ್ಟಿನ್ ಕಂಪನಿ ತಯಾರಿಸಿರುವ 24 ಹೆಲಿಕಾಪ್ಟರ್‌ಗಳನ್ನು ಭಾರತೀಯ ನೌಕಾಪಡೆಯು ಅಮೆರಿಕ ಸರ್ಕಾರದಿಂದ ವಿದೇಶಿ ಮಿಲಿಟರಿ ಉಪಕರಣದ ಮಾರಾಟದ ಅಡಿ 2.4 ಬಿಲಿಯನ್ ಡಾಲರ್ ವೆಚ್ಚದಲ್ಲಿ ಖರೀದಿಸುತ್ತಿದೆ. ಇದರ ಭಾಗವಾಗಿ ಭಾರತಕ್ಕೆ ಅಮೆರಿಕ ಎರಡು ಹೆಲಿಕಾಪ್ಟರ್‌ಗಳನ್ನು ಹಸ್ತಾಂತರಿಸಿದೆ.
ಭಾರತವು ಕಡಲ ಸುರಕ್ಷತೆಗಾಗಿ ಎರಡು MRH-60 ಆರ್ ಮಲ್ಟಿ ರೋಲ್ ಹೆಲಿಕಾಪ್ಟರ್ ಹಾಗೂ ಪಿ-8 ಪೋಸಿಡಾನ್ ಕಡಲ ಕಣ್ಗಾವಲು ವಿಮಾನ ಹಾರಾಟ ನಡೆಸುತ್ತಿದೆ. ಈ ಹಿನ್ನೆಲೆ ಭಾರತೀಯ ನೌಕಾಪಡೆ(ರಕ್ಷಣಾ ಇಲಾಖೆ)ಗೆ ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಜಾನ್ ಕಿರ್ಬಿ ಅಭಿನಂದನೆ ತಿಳಿಸಿದ್ದಾರೆ.
ಇಂಡೋ - ಪೆಸಿಫಿಕ್ನಲ್ಲಿ ಪಿ-8 ವಿಮಾನವನ್ನು ಹಾರಾಟ ನಡೆಸಿ ಕಡಲ ತೀರದ ರಕ್ಷಣೆಗೆ ಹೆಚ್ಚಿನ ಆದ್ಯತೆ ಕೊಡುವ ರಾಷ್ಟ್ರ ಭಾರತವಾಗಿದೆ. ನಮ್ಮ ಎರಡೂ ನೌಕಾಪಡೆಗಳ ನಡುವಿನ ಸಹಕಾರ ಮತ್ತು ಪರಸ್ಪರ ಕಾರ್ಯ ಸಾಧ್ಯತೆಯನ್ನು ಬಲಪಡಿಸುತ್ತದೆ ಎಂದು ಪೆಂಟಗನ್ ಹೇಳಿದೆ.
MH-60R ಕಾರ್ಯಾಚರಣೆಯಲ್ಲಿ ಅತ್ಯಂತ ಸುಧಾರಿತ ಕಡಲ ಮಲ್ಟಿ - ಮಿಷನ್ ಹೆಲಿಕಾಪ್ಟರ್ ಆಗಿದೆ. ರೋಮಿಯೋ ಆಯ್ಕೆಯ ಮೂಲಕ ಭಾರತೀಯ ನೌಕಾಪಡೆಯು ಟೀಮ್ ಸೀಹಾಕ್‌ನಲ್ಲಿಟ್ಟಿರುವ ವಿಶ್ವಾಸವನ್ನು ಪ್ರಶಂಸಿಸುತ್ತೇವೆ. ಅಮೆರಿಕ ನೌಕಾಪಡೆ ಹಾಗೂ ಭಾರತೀಯ ನೌಕಾಪಡೆ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಲು ನಾವು ಬದ್ಧರಾಗಿದ್ದೇವೆ ಎಂದು ಲಾಕ್ಹೀಡ್ ಮಾರ್ಟಿನ್ ಇಂಡಿಯಾದ ಉಪಾಧ್ಯಕ್ಷ ವಿಲಿಯಂ ಬ್ಲೇರ್ ಹೇಳಿದ್ದಾರೆ.
ಇದು ಎಲ್ಲ ಹವಾಮಾನದಲ್ಲಿ ಬಳಸಬಹುದಾದ ಹೆಲಿಕಾಪ್ಟರ್ ಆಗಿದ್ದು, ಅತ್ಯಾಧುನಿಕ ಏವಿಯಾನಿಕ್ಸ್‌ನೊಂದಿಗೆ ಅನೇಕ ಕಾರ್ಯಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ. ಈ ಎಂಆರ್‌ಹೆಚ್‌ನ ಸೇರ್ಪಡೆಯು ಭಾರತೀಯ ನೌಕಾಪಡೆಯ ಮೂರು ಆಯಾಮದ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಈ ಹೆಲಿಕಾಪ್ಟರ್‌ಗಳನ್ನು ಹಲವಾರು ವಿಶಿಷ್ಟ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಸಿದ್ಧಪಡಿಸಲಾಗಿದೆ.
ಇದನ್ನೂ ಓದಿ : US ನಿಂದ MRH-60 ಹೆಲಿಕಾಪ್ಟರ್‌ಗಳ ಹಸ್ತಾಂತರ.. ಭಾರತೀಯ ನೌಕಾಪಡೆಗೆ ಇನ್ನಷ್ಟು ಬಲ
ಈ ಹೆಲಿಕಾಪ್ಟರ್‌ಗಳ ಚಾಲನೆಗೆ ಸಂಬಂಧಿಸಿದಂತೆ ಭಾರತೀಯ ನೌಕಾಪಡೆಯ ಸಿಬ್ಬಂದಿಯ ಮೊದಲ ಬ್ಯಾಚ್ ಪ್ರಸ್ತುತ ಅಮೆರಿಕದಲ್ಲಿ ತರಬೇತಿ ಪಡೆಯುತ್ತಿದೆ.