ರೋಸೌ, ಡೊಮಿನಿಕಾ: ದೇಶಭ್ರಷ್ಟ ಉದ್ಯಮಿ ಮತ್ತು ಅತಿಕ್ರಮ ಪ್ರವೇಶದಿಂದ ಡೊಮಿನಿಕಾ ರಾಷ್ಟ್ರದಲ್ಲಿ ಬಂಧಿತನಾಗಿ, ವಿಚಾರಣೆಗೆ ಒಳಪಟ್ಟಿರುವ ಆರೋಪಿ ಮೆಹುಲ್ ಚೋಕ್ಸಿ ಜೂನ್ 14ರಂದು ರೋಸೌ ಕೋರ್ಟ್ಗೆ ಹಾಜರಾಗಬೇಕಿದ್ದು, ಹಾಜರಾಗಲು ಸಾಧ್ಯವಾಗಿಲ್ಲ ಎಂದು ಮೆಹುಲ್ ಚೋಕ್ಸಿ ವಕೀಲರು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಕೋರ್ಟ್ಗೆ ಮಾಹಿತಿ ನೀಡಿರುವ ಅವರು ಮೆಹುಲ್ ಚೋಕ್ಸಿ ಮಾನಸಿಕ ಒತ್ತಡದಿಂದ ಬಳಲುತ್ತಿದ್ದು, ಅಧಿಕ ರಕ್ತದೊತ್ತಡ ಕಾರಣದಿಂದ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಡೊಮಿನಿಕಾಗೆ ಅಕ್ರಮ ಪ್ರವೇಶದ ವಿಚಾರಣೆ ಜೂನ್ 14ರಂದು ನಡೆಯಬೇಕಿದ್ದು, ಮುಖ್ಯ ಮ್ಯಾಜಿಸ್ಟ್ರೇಟ್ ಕ್ಯಾಂಡಿಯಾ ಕರೆಟ್ಟೆ-ಜಾರ್ಜ್ ವಿಚಾರಣೆ ನಡೆಸಬೇಕಿತ್ತು. ಆದರೆ ಅನಾರೋಗ್ಯ ಸಮಸ್ಯೆಯಿಂದ ಅವರು ವಿಚಾರಣೆಗೆ ಹಾಜರಾಗಲಿಲ್ಲ ಎಂದು ವಕೀಲರು ಮಾಹಿತಿ ನೀಡಿದ್ದಾರೆಂದು ಆ್ಯಂಟಿಗುವಾ ನ್ಯೂಸ್ ರೂಮ್ ವರದಿ ಮಾಡಿದೆ.
ಇದನ್ನೂ ಓದಿ: ಜಾಗತಿಕ ಭದ್ರತೆಗೆ ಚೀನಾ ಸವಾಲು: ನ್ಯಾಟೋ ಘೋಷಣೆ
ಚೋಕ್ಸಿ ಅನಾರೋಗ್ಯದಿಂದ ಹಾಜರಾಗುತ್ತಿಲ್ಲ ಎಂಬುದನ್ನು ದೃಢಪಡಿಸಲು ಡೊಮಿನಿಕಾ-ಚೀನಾ ಫ್ರೆಂಡ್ಶಿಪ್ ಆಸ್ಪತ್ರೆಯ ವೈದ್ಯರ ಸಹಿಯುಳ್ಳ ವೈದ್ಯಕೀಯ ಪ್ರಮಾಣಪತ್ರವನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಸುಮಾರು ಎರಡು ವಾರಗಳಿಂದ ಚೋಕ್ಸಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈದ್ಯಕೀಯ ಪ್ರಮಾಣಪತ್ರವನ್ನು ಪರಿಶೀಲನೆ ನಡೆಸಿದ ಕೋರ್ಟ್, ಜೂನ್ 25ರ ಬೆಳಗ್ಗೆ 9 ಗಂಟೆಗೆ ವಿಚಾರಣೆ ಮುಂದೂಡಿದ್ದು, ಜೂನ್ 17ರಂದು ಚೋಕ್ಸಿಯನ್ನು ಕೋರ್ಟ್ಗೆ ತರಬೇಕೆಂದು ಆದೇಶ ನೀಡಲಾಗಿದೆ.