ವಾಷಿಂಗ್ಟನ್: ಮಹಾರಾಷ್ಟ್ರದಲ್ಲಿ ಸುರಿದ ಧಾರಾಕಾರ ಮಳೆ ಹಾಗೂ ಜಲಾಶಯಗಳಿಂದ ಬಿಡುಗಡೆಯಾದ ನೀರು ಪ್ರವಾಹ ಪರಿಸ್ಥಿತಿ ತಂದಿಟ್ಟಿದೆ. ಈ ಭೀಕರ ಪ್ರವಾಹಕ್ಕೆ ಮಹಾರಾಷ್ಟ್ರ ಅಕ್ಷರಶಃ ತಲ್ಲಣಗೊಂಡಿದೆ. ಈ ಹಿನ್ನೆಲೆ ನೆರವು ನೀಡಲು 'ಅಮೆರಿಕನ್ ನಾನ್ ಪ್ರಾಫಿಟ್ ಆರ್ಗನೈಜೇಷನ್' ಎನ್ಜಿಒ ಸಂಸ್ಥೆಯೊಂದು ಮುಂದಾಗಿದ್ದು, ವೈದ್ಯಕೀಯ ಸೇವೆ ಒದಗಿಸುತ್ತಿದೆ.
ರಾಜ್ಯದ ಸೊಲ್ಲಾಪುರ, ಕೊಲ್ಲಾಪುರ, ಸಾಂಗ್ಲಿ, ಪುಣೆ, ಸತಾರಾ ಮತ್ತು ಮರಾಠವಾಡ, ಲಾತೂರ್, ಉಸ್ಮಾನಾಬಾದ್ ಮತ್ತು ಬೀಡ್ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಾಗಿವೆ. ಸಾವಿರಾರು ಜನರನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದ್ದು, 200 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಮಹಾರಾಷ್ಟ್ರದ ನೆರವಿಗೆ ಯುಎಸ್ ಎನ್ಜಿಒ ಸಂಸ್ಥೆಯೊಂದು ಸಹಾಯ ಹಸ್ತ ಚಾಚಿದ್ದು, ಸಾಂಗ್ಲಿ, ಸತಾರಾ ಮತ್ತು ರತ್ನಗಿರಿಗೆ ಮೂರು ವೈದ್ಯಕೀಯ ತಂಡಗಳನ್ನು ಬುಧವಾರ ಕಳಿಸಿರುವುದಾಗಿ ಅಮೆರಿಕನ್ ಲಾಭರಹಿತ ಸಂಸ್ಥೆ (American non-profit organization) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಥಳೀಯ ಆರೋಗ್ಯಾಧಿಕಾರಿಗಳ ಸಹಭಾಗಿತ್ವದಲ್ಲಿ ಯುಎಸ್ ಎನ್ಜಿಒ ಕಳುಹಿಸಿರುವ ಈ ವೈದ್ಯಕೀಯ ಸಿಬ್ಬಂದಿ ತಂಡ ಕಾರ್ಯನಿರ್ವಹಿಸಲಿದ್ದು, 10 ದಿನಗಳವರೆಗೆ ಸಂತ್ರಸ್ತರಿಗೆ ಅಗತ್ಯವಾದ ವೈದ್ಯಕೀಯ ಆರೈಕೆ ಒದಗಿಸಲಿವೆ.
ರಾಜ್ಯ ಸರ್ಕಾರದ ಮಾಹಿತಿ ಪ್ರಕಾರ, ಕಳೆದ ವಾರ ಮಹಾರಾಷ್ಟ್ರದಲ್ಲಿ ಸಂಭವಿಸಿದ ಪ್ರವಾಹಕ್ಕೆ ಸಾವನ್ನಪ್ಪಿದವರ ಸಂಖ್ಯೆ 213ಕ್ಕೆ ಏರಿದ್ದು, ರಾಯ್ಗಡ ಜಿಲ್ಲೆಯೊಂದರಲ್ಲೇ ಸುಮಾರು 100 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಸಾಂಗ್ಲಿ ಜಿಲ್ಲೆಯ 2,11,808 ಮಂದಿ ಸೇರಿದಂತೆ ಒಟ್ಟು 4,35,879 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 349 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, ಕೊಲ್ಲಾಪುರದಲ್ಲಿ 216, ಸಾಂಗ್ಲಿಯಲ್ಲಿ 74, ಸತಾರಾದಲ್ಲಿ 29, ರತ್ನಾಗಿರಿಯಲ್ಲಿ 16 ಮತ್ತು ರಾಯ್ಗಡದಲ್ಲಿ 14 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ.