ನ್ಯೂಯಾರ್ಕ್ (ಅಮೆರಿಕ) : ಶಾಲಾ-ಕಾಲೇಜುಗಳ ತರಗತಿಯಲ್ಲಿ ಹಿಜಾಬ್ ಧರಿಸುವಿಕೆ ನಿಷೇಧ ಆದೇಶವನ್ನು ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟ್ ತೀರ್ಪು ಬಗ್ಗೆ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (ಯುಎಸ್ಸಿಐಆರ್ಎಫ್) ಆಕ್ಷೇಪ ವ್ಯಕ್ತಪಡಿಸಿದೆ. ಉಚ್ಛ ನ್ಯಾಯಾಲಯದ ಆದೇಶವನ್ನು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಕರೆದಿದೆ.
ತರಗತಿಯಲ್ಲಿ ಹಿಜಾಬ್ ಧರಿಸುವಿಕೆಗೆ ನಿಷೇಧಿಸಿದ ಹೈಕೋರ್ಟ್ ಆದೇಶವು, 'ತಮ್ಮ ನಂಬಿಕೆಗೆ ಅನುಗುಣವಾಗಿ ಶಿಕ್ಷಣ ಪಡೆಯಬೇಕೆಂಬ ಮಹಿಳೆಯರು ಮತ್ತು ಬಾಲಕಿಯರಿಗೆ ಮಾಡಿರುವ ಗಂಭೀರ ಅನ್ಯಾಯ ಮತ್ತು ಅವಮಾನ' ಎಂದು ಆಯೋಗದ ಆಯುಕ್ತರಲ್ಲಿ ಒಬ್ಬರಾದ ಅನುರಿಮಾ ಭಾರ್ಗವ್ ಹೇಳಿದ್ದಾರೆ.
ಯುಎಸ್ಸಿಐಆರ್ಎಫ್ ಇದು ಸರ್ಕಾರದ ಏಜೆನ್ಸಿಯಾಗಿದೆ. ಜಾಗತಿಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕುಗಳ ಬಗ್ಗೆ ನಿಗಾವಹಿಸುತ್ತದೆ ಮತ್ತು ಅಮೆರಿಕ ಸರ್ಕಾರಕ್ಕೆ ನೀತಿ-ನಿಯಮಗಳನ್ನು ಶಿಫಾರಸು ಮಾಡುತ್ತದೆ. ಇನ್ನು, ಈ ಆಯೋಗವು 2021ರ ತನ್ನ ವಾರ್ಷಿಕ ವರದಿಯಲ್ಲಿ ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವು ನಕಾರಾತ್ಮಕತೆ ಹಾದಿಯಲ್ಲಿ ಸಾಗುತ್ತಿದೆ ಎಂದು ದೂರಿತ್ತು.
ಇದನ್ನೂ ಓದಿ: ಬಾಂಗ್ಲಾದಲ್ಲಿ ಹೋಳಿ ಸಂದರ್ಭದಲ್ಲೇ ಇಸ್ಕಾನ್ ದೇಗುಲ ಧ್ವಂಸ : ಕಣ್ಮುಚ್ಚಿ ಕುಳಿತ ವಿಶ್ವಸಂಸ್ಥೆ ವಿರುದ್ಧ ಆಕ್ರೋಶ