ನ್ಯೂಯಾರ್ಕ್( ಅಮೆರಿಕ): ಮಗು ಸೇರಿದಂತೆ ನಾಲ್ವರು ಭಾರತೀಯ ಕುಟುಂಬವೊಂದು ಹಿಮದಲ್ಲಿ ಹೆಪ್ಪುಗಟ್ಟಿ ಸಾವನ್ನಪ್ಪಿರುವ ಘಟನೆ ಅಮೆರಿಕ - ಕೆನಡಾ ಗಡಿಯಲ್ಲಿ ನಡೆದಿದೆ. ಇವರ ಸಾವಿನ ಕುರಿತು ತನಿಖೆ ಚುರುಕುಗೊಂಡಿದೆ.
ಏಳು ಜನರ ಬಂಧನ: ಅಮೆರಿಕ-ಕೆನಡಾ ಗಡಿಯಲ್ಲಿ ದೊಡ್ಡ ಮಾನವ ಕಳ್ಳಸಾಗಣೆ ಕಾರ್ಯಾಚರಣೆಯಲ್ಲಿ ಒಂದು ಶಿಶು ಸೇರಿದಂತೆ ಕುಟುಂಬದ ನಾಲ್ವರು ಭಾರತೀಯರು ಸಾವನ್ನಪ್ಪಿದ ಬಗ್ಗೆ ತನಿಖೆಗಳು ನಡೆಯುತ್ತಿದ್ದು, ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿದ್ದ ಆರೋಪದಡಿ ಗುಜರಾತ್ ಮೂಲದ ಏಳು ಜನರನ್ನು ಬಂಧಿಸಲಾಗಿದೆ.
ಮಾನವ ಕಳ್ಳಸಾಗಣೆ ಆರೋಪದಡಿ 47 ವರ್ಷದ ಯುಎಸ್ ಪ್ರಜೆ ಸ್ಟೀವ್ ಶಾಂಡ್ ವಿರುದ್ಧ ಮಿನ್ನೇಸೋಟ ಜಿಲ್ಲೆಯ ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ಗುರುವಾರ ಕ್ರಿಮಿನಲ್ ದೂರು ದಾಖಲಿಸಲಾಗಿದೆ.
ಮಾನವ ಕಳ್ಳಸಾಗಣೆ: ದಾಖಲೆಯಿಲ್ಲದ ವಿದೇಶಿ ಪ್ರಜೆಗಳನ್ನು ಕಳ್ಳಸಾಗಣೆ ಮೂಲಕ ಸಾಗಿಸುತ್ತಿದ್ದ ಶಾಂಡ್ನನ್ನು ಜನವರಿ 19 ರಂದು ಯುಎಸ್ / ಕೆನಡಾದ ಗಡಿಯ ಬಳಿ ಬಂಧಿಸಲಾಯಿತು. ಶಾಂಡ್ ಇಬ್ಬರು ಭಾರತೀಯ ಪ್ರಜೆಗಳನ್ನು ಅಮೆರಿಕಕ್ಕೆ ಸಾಗಿಸಲು ಯತ್ನಿಸುತ್ತಿದ್ದ ಎಂದು ತಿಳಿದು ಬಂದಿದೆ. ಇನ್ನು ದೂರಿನಲ್ಲಿ ಇಬ್ಬರು ಭಾರತೀಯ ಪ್ರಜೆಗಳನ್ನು ಎಸ್ಪಿ' ಮತ್ತು ವೈಪಿ ಎಂದು ಗುರುತಿಸಲಾಗಿದೆ.
ಓದಿ: Earthquake in India: ಲಡಾಖ್- ಕಾರ್ಗಿಲ್, ಅರುಣಾಚಲ ಪ್ರದೇಶದಲ್ಲಿ ಭೂಕಂಪನ
ಇದಲ್ಲದೇ ಶಾಂಡ್ ಬಂಧನದ ವೇಳೆಗೆ ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಐವರು ಭಾರತೀಯರನ್ನೂ ಗುರುತಿಸಿ ಬಂಧಿಸಲಾಗಿತ್ತು. ಎಲ್ಲ ವಿದೇಶಿ ಪ್ರಜೆಗಳು ಗುಜರಾತಿ ಭಾಷೆ ಮಾತನಾಡುತ್ತಿದ್ದರು. ಉಳಿದವರು ಇಂಗ್ಲಿಷ್ ಭಾಷೆ ಮಾತನಾಡುವ ಸಾಮರ್ಥ್ಯವನ್ನು ಹೊಂದಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಶಿಶು ಸೇರಿದಂತೆ ನಾಲ್ಕು ಭಾರತೀಯ ಪ್ರಜೆಗಳ ಕುಟುಂಬ ಅಮೆರಿಕ - ಕೆನಡಾ ಗಡಿಯಲ್ಲಿ ಹೆಪ್ಪುಗಟ್ಟಿದ ಹಿಮಪಾತದ ಸಮಯದಲ್ಲಿ ದಾಟುವ ಪ್ರಯತ್ನ ವಿಫಲವಾದ ಹಿನ್ನೆಲೆ ಸಾವನ್ನಪ್ಪಿರ ಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ.
ಸಹಾಯಕ ಕಮಿಷನರ್ ಜೇನ್ ಮ್ಯಾಕ್‌ಲಾಚಿ, ಮ್ಯಾನಿಟೋಬಾ ಆರ್‌ಸಿಎಂಪಿಯ ಕಮಾಂಡಿಂಗ್ ಅಧಿಕಾರಿ ಮಾಧ್ಯಮಗಳೊಂದಿಗೆ ಮಾತನಾಡಿ, ಆರ್‌ಸಿಎಂಪಿ ಅಧಿಕಾರಿಗಳು ನಾಲ್ವರ ಶವಗಳನ್ನು ಕೆನಡಾದ ಗಡಿಯಲ್ಲಿ ಪತ್ತೆ ಮಾಡಿದ್ದಾರೆ. ಇನ್ನಷ್ಟು ಜನ ಸಾವನ್ನಪ್ಪಿರಬಹುದೆಂದು ಅಧಿಕಾರಿಗಳು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ತೀವ್ರ ಕೊರೆವ ಚಳಿ- ಗಡಿ ದಾಟುವ ಕೆಲಸ ಮಾಡಬೇಡಿ ಎಂದು ಮನವಿ: -41 ಡಿಗ್ರಿ ತಾಪಮಾನವಿದ್ದು, ಇಂತಹ ಸ್ಥಿತಿಯಲ್ಲಿ ಗಡಿ ದಾಟುವ ಯತ್ನ ಮಾಡಬಾರದು. ಕೆಲವೇ ಸೆಕೆಂಡ್ಗಳಲ್ಲಿ ರಕ್ತ ಹೆಪ್ಪುಗಟ್ಟುತ್ತೆ. ಕಳ್ಳಸಾಗಾಣಿಕೆದಾರರು ತಾವು ಗಳಿಸಲಿರುವ ಹಣದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ನಿಮ್ಮ ಜೀವಗಳಿಗೆ ಯಾವುದೇ ಬೆಲೆ ಕೊಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದರು.
ಓದಿ: ಮೊದಲ ಮಗು ಪಡೆದ ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಜೊನಾಸ್ ದಂಪತಿ!
ವಿದೇಶಾಂಗ ಸಚಿವರ ಕಳವಳ: ನಾಲ್ವರು ಭಾರತೀಯರ ಕುಟುಂಬದ ಸಾವಿನ ಬಗ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಶುಕ್ರವಾರ ಆಘಾತ ವ್ಯಕ್ತಪಡಿಸಿದ್ದಾರೆ. ಕೆನಡಾದಲ್ಲಿ ಶಿಶು ಸೇರಿದಂತೆ 4 ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ವರದಿಯಿಂದ ಆಘಾತವಾಗಿದೆ. ಪರಿಸ್ಥಿತಿಗೆ ತುರ್ತಾಗಿ ಸ್ಪಂದಿಸುವಂತೆ ಅಮೆರಿಕ ಮತ್ತು ಕೆನಡಾದಲ್ಲಿರುವ ನಮ್ಮ ರಾಯಭಾರಿಗಳನ್ನು ಕೇಳಿದ್ದೇವೆ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಜೈಶಂಕರ್ ಅವರು ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಮತ್ತು ಕೆನಡಾದಲ್ಲಿರುವ ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ಅವರೊಂದಿಗೆ ಮಾತನಾಡಿ ಮಾಹಿತಿ ಕಲೆ ಹಾಕಿದ್ದಾರೆ.
ಹೀಗಾಗಬಾರದಿತ್ತು: ಇದೊಂದು ದುರದೃಷ್ಟಕರ ಮತ್ತು ದುರಂತ ಘಟನೆ ಎಂದು ರಾಯಭಾರಿ ಸಂಧು ಹೇಳಿದ್ದಾರೆ. ಅವರ ನಡೆಯುತ್ತಿರುವ ತನಿಖೆಯ ಕುರಿತು ನಾವು US ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. @IndiainChicago ದ ದೂತಾವಾಸದ ತಂಡವು ಇಂದು ಮಿನ್ನೇಸೋಟಕ್ಕೆ ಪ್ರಯಾಣಿಸುತ್ತಿದೆ ಮತ್ತು ಅಗತ್ಯವಿರುವ ಯಾವುದೇ ಸಹಾಯವನ್ನು ಒದಗಿಸುತ್ತಿದೆ ಎಂದು ರಾಯಭಾರಿ ಸಂಧು ಟ್ವೀಟ್ ಮಾಡಿದ್ದಾರೆ.
ಇದು ಘೋರ ದುರಂತ ಎಂದು ಕೆನಡಾದಲ್ಲಿರುವ ಭಾರತದ ಹೈಕಮಿಷನರ್ ಬಿಸಾರಿಯಾ ಹೇಳಿದ್ದಾರೆ. ಸಮನ್ವಯಗೊಳಿಸಲು ಮತ್ತು ಸಹಾಯ ಮಾಡಲು ಭಾರತೀಯ ಕಾನ್ಸುಲರ್ ತಂಡವು ಇಂದು @IndiainToronto ನಿಂದ ಮ್ಯಾನಿಟೋಬಾಗೆ ಪ್ರಯಾಣಿಸುತ್ತಿದೆ. ಈ ಗೊಂದಲದ ಘಟನೆಗಳನ್ನು ತನಿಖೆ ಮಾಡಲು ನಾವು ಕೆನಡಾದ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತೇವೆ ಎಂದು ಬಿಸಾರಿಯಾ ಸಹ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ