ವಾಷಿಂಗ್ಟನ್: ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಬಂದಿರುವುದಕ್ಕೆ ಅಭಿನಂದನೆಗಳು. ಪ್ರಜಾಪ್ರಭುತ್ವದ ರಾಷ್ಟ್ರಗಳಿಗೆ ಭಾರತದ ಚುನಾವಣೆ ಒಂದು ಮಾದರಿ ಎಂದು ಅಮೆರಿಕ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಶ್ಲಾಘಿಸಿದೆ.
ಮಾನವ ಇತಿಹಾಸದಲ್ಲಿ ಭಾರತದಲ್ಲಿರುವ ಪ್ರಜಾಪ್ರಭುತ್ವದ ಚುನಾವಣಾ ಪದ್ಧತಿ ಬಹುದೊಡ್ಡ ಪ್ರಯೋಗಾರ್ಥ ಸಾಧನವಾಗಿದ್ದು, ಇಡೀ ಪ್ರಪಂಚಕ್ಕೆ ಹಾಗೂ ಪ್ರಜಾಪ್ರಭುತ್ವ ಅಳವಡಿಸಿಕೊಂಡಿರುವ ರಾಷ್ಟ್ರಗಳಿಗೆ ಒಂದು ಪ್ರೇರಣೆ. ಐತಿಹಾಸಿಕ ಸಂಖ್ಯೆಯಲ್ಲಿ ಮತದಾನ ಮಾಡಿದ ಭಾರತೀಯರ ಕೊಡುಗೆ ಶ್ಲಾಘನೀಯ. ಇಂತಹ ಅಪವಾದಾತ್ಮಕ ಸಾಧನೆಯನ್ನು ಕಾರ್ಯಗತಗೊಳಿಸಿದ ಭಾರತದ ಸರ್ಕಾರದ ಶ್ರಮ ದೊಡ್ಡದು ಎಂದು ಅಮೆರಿಕ ಸ್ಟೇಟ್ ವಿಭಾಗದ ವಕ್ತಾರ ಮೊರ್ಗನ್ ಆರ್ಟಗಸ್ ಪ್ರಶಂಸಿದ್ದಾರೆ.
ಭಾರತ ಮತ್ತು ಅಮೆರಿಕ ಜಂಟಿಯಾಗಿ ಹಂಚಿಕೊಂಡ ಮೌಲ್ಯ, ವಿಶಾಲವಾದ ಪರಸ್ಪರ ಜನರ ಸಂಬಂಧ, ಸುರಕ್ಷಾ ಹಾಗೂ ಬಲಿಷ್ಠವಾದ ಇಂಡೋ-ಪೆಸಿಫಿಕ್ ಒಪ್ಪಂದಕ್ಕೆ ಬದ್ಧವಾಗಿರಲಿದೆ. ಉಭಯ ರಾಷ್ಟ್ರಗಳು ಪ್ರಬಲವಾದ ಕಾರ್ಯತಂತ್ರದ ಪಾಲುದಾರಿಕೆಯನ್ನು ಆನಂದಿಸುತ್ತಿವೆ ಹೇಳಿದ್ದಾರೆ.
ನೂತನವಾಗಿ ಆಯ್ಕೆಯಾದ ಚುನಾಯಿತ ಸರ್ಕಾರದೊಂದಿಗೆ ಉತ್ಸಹದಿಂದ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ. ಆರ್ಥಿಕ ಮತ್ತು ಇಂಧನ ಸಂಬಂಧವನ್ನು ವಿಸ್ತರಿಸಲು ಬಯಸುತ್ತೇವೆ. ಭಯೋತ್ಪಾದನೆಯಂತಹ ಬೆದರಿಕೆಯನ್ನು ತೊಡೆದು ಹಾಕಲು ಕೈ ಜೋಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.