ವಾಷಿಂಗ್ಟನ್: ಸಾರ್ವಜನಿಕ ಹೂಡಿಕೆಯಲ್ಲಿ ಹೆಚ್ಚಳ ಮತ್ತು ಉತ್ಪಾದನೆಯನ್ನು ಉತ್ತೇಜಿಸಲು ಪ್ರೋತ್ಸಾಹ ನೀಡುತ್ತಿರುವುದರಿಂದ 2021-22ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ. 8.3ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ಈ ಬಗ್ಗೆ ದಕ್ಷಿಣ ಏಷ್ಯಾ ಪ್ರದೇಶದ ವಿಶ್ವಬ್ಯಾಂಕ್ ಮುಖ್ಯ ಅರ್ಥಶಾಸ್ತ್ರಜ್ಞ ಹ್ಯಾನ್ಸ್ ಟಿಮ್ಮರ್ ಮಾತನಾಡಿ, ಕೊರೊನಾ 2ನೇ ಅಲೆ ಹಿನ್ನೆಲೆ ದೇಶದ ಆರ್ಥಿಕತೆ ನೆಲ ಕಚ್ಚಿತ್ತು. ಸದ್ಯ ವೈರಸ್ ತೀವ್ರತೆ ಕಡಿಮೆಯಾಗಿದೆ. ವ್ಯಾಪಾರ, ವಹಿವಾಟುಗಳಲ್ಲಿ ಚೇತರಿಕೆ ಕಂಡಿದೆ. ಹೀಗಾಗಿ, ನಾವು ಈ ಆರ್ಥಿಕ ವರ್ಷದಲ್ಲಿ ಭಾರತೀಯ ಆರ್ಥಿಕತೆಯ ಬೆಳವಣಿಗೆ ದರ ಶೇ.8.3ರಷ್ಟು ಹೆಚ್ಚಾಗುವ ನಿರೀಕ್ಷೆ ಹೊಂದಿದ್ದೇವೆ ಎಂದರು.
ಕೋವಿಡ್ 2ನೇ ಅಲೆಗೂ ಮುನ್ನ ನಾವು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ, ಕೊರೊನಾ ಹಾವಳಿಯಿಂದಾಗಿ ಆರ್ಥಿಕ ಚಟುವಟಿಕೆಗಳು ಮತ್ತೆ ಸ್ಥಗಿತಗೊಂಡವು. ಆದರೂ, ಜಿಡಿಪಿ ಹೆಚ್ಚಾಗುವ ನಿರೀಕ್ಷೆ ಸಂತಸದ ವಿಚಾರ. ಕೋವಿಡ್ ಬಿಕ್ಕಟ್ಟಿನ ನಡುವೆಯೂ ಆರ್ಥಿಕತೆ ಚೇತರಿಸಿಕೊಂಡಿದೆ ಎಂದರು.
ಮಾರ್ಚ್ 31 ರಂದು ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವಾರ್ಷಿಕ ಸ್ಪ್ರಿಂಗ್ ಮೀಟಿಂಗ್‌ಗೆ ಮುಂಚಿತವಾಗಿ ಬಿಡುಗಡೆ ಮಾಡಿದ ದಕ್ಷಿಣ ಏಷ್ಯಾ ಆರ್ಥಿಕ ಗಮನ ವರದಿಯಲ್ಲಿ 2021-22ಕ್ಕೆ ಭಾರತದ ಜಿಡಿಪಿ ಬೆಳವಣಿಗೆ ಶೇ. 7.5 ರಿಂದ ಶೇ.12.5 ರಷ್ಟಾಗಬಹುದು ಎಂದು ವಿಶ್ವ ಬ್ಯಾಂಕ್ ಹೇಳಿದೆ.
ಏಪ್ರಿಲ್-ಮೇ ತಿಂಗಳಲ್ಲಿ ದೇಶದಲ್ಲಿ ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡಿದ್ದು, ಜನರನ್ನು ಸಂಕಷ್ಟಕ್ಕೆ ದೂಡಿತ್ತು. ವೈದ್ಯಕೀಯ ಆಮ್ಲಜನಕ, ಹಾಸಿಗೆಗಳ ಕೊರತೆ ಹೆಚ್ಚಾಗಿ ಅವ್ಯವಸ್ಥೆ ಸೃಷ್ಟಿಯಾಯಿತು. ಆದರೆ, ಎರಡನೇ ಅಲೆ ಅತಿ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ ಎಂದು ಟಿಮ್ಮರ್ ಹೇಳಿದ್ರು.
ದೇಶದಲ್ಲಿ ಆಂತರಿಕವಾಗಿ ಮತ್ತು ಕೆಲವೊಮ್ಮೆ ಬಾಹ್ಯವಾಗಿ ಪರಿಸ್ಥಿತಿ ತುಂಬಾ ಅನಿಶ್ಚಿತವಾಗಿದೆ ಎಂದು ನಾವು ಭಾವಿಸುತ್ತೇವೆ. ಆದರೂ, ಭಾರತದ ಆರ್ಥಿಕತೆಗೆ ಬಹಳ ವಿಶಾಲವಾದ ಸಂಭವನೀಯ ಫಲಿತಾಂಶಗಳನ್ನು ಬಳಸುತ್ತೇವೆ. ಪ್ರಸ್ತುತ ವರ್ಷದಲ್ಲಿ ಅನಿಶ್ಚಿತತೆ ಕಡಿಮೆಯಾಗಿ ನಾವು ಹೆಚ್ಚು ಪ್ರಗತಿ ಸಾಧಿಸುತ್ತಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.