ನವದೆಹಲಿ: ಹಲವಾರು ಸವಾಲುಗಳ ಹೊರತಾಗಿಯೂ ವಿವಿಧ ದೇಶಗಳಲ್ಲಿ ನಿಯೋಜಿಸಿದ್ದ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯು ಆ ರಾಷ್ಟ್ರಗಳಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ 'ವಿಶ್ವಸಂಸ್ಥೆ ಶಾಂತಿಪಾಲನಾ ಕಾರ್ಯಾಚರಣೆಗಳು' ಎಂಬ ವಿಷಯದ ಕುರಿತು ಮುಕ್ತ ಸಂವಾದದಲ್ಲಿ ಮಾತನಾಡಿದ ಅವರು ಭಾರತ ಅತಿ ದೊಡ್ಡ ಶಾಂತಿ ಪಾಲನಾ ಪಡೆಯನ್ನು ಹೊಂದಿದ್ದು, ಶಾಂತಿ ಪಾಲನಾ ಪಡೆ ಆರಂಭವಾದಾಗಿನಿಂದಲೂ 49 ದೇಶಗಳಲ್ಲಿ ಸುಮಾರು ಎರಡೂವರೆ ಲಕ್ಷ ಸೇನಾ ಸಿಬ್ಬಂದಿಯನ್ನು ನಿಯೋಜಿಸಿದೆ ಎಂದಿದ್ದಾರೆ.
ಭಾರತ ಅತ್ಯಂತ ವಿಶ್ವಾಸಾರ್ಹವಾದ, ಸುಶಿಕ್ಷಿತ ಮತ್ತು ವೃತ್ತಿಪರ ಶಾಂತಿ ಪಾಲನಾ ಪಡೆಯನ್ನು ಹೊಂದಿದ್ದು, ಪ್ರಸ್ತುತ ವಿಶ್ವಸಂಸ್ಥೆಯ 9 ಕಾರ್ಯಾಚರಣೆಗಳಲ್ಲಿ ಐದೂವರೆ ಸಾವಿರ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಂತಿ ಪಾಲನಾ ಪಡೆಗಳಿಗೆ ಲಸಿಕೆ ನೀಡಿರುವುದು ಭಾರತಕ್ಕೆ ಸಂತೋಷದ ಸಂಗತಿ ಎಂದು ಲೇಖಿ ಹೇಳಿದ್ದಾರೆ.
ಕಳೆದ ಏಳು ದಶಕಗಳಲ್ಲಿ ಒಂದು ಮಿಲಿಯನ್ಗೂ ಹೆಚ್ಚು ಪುರುಷರು ಮತ್ತು ಮಹಿಳಾ ಸಿಬ್ಬಂದಿ ಸುಮಾರು 70ಕ್ಕೂ ಹೆಚ್ಚು ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದಾರೆ. ವೃತ್ತಿಪರತೆ, ಸಮರ್ಪಣಾ ಭಾವದ ಮೂಲಕ ಸೇವೆ ಸಲ್ಲಿಸುವ ಸಿಬ್ಬಂದಿಗೆ ಭಾರತ ಗೌರವ ಸಲ್ಲಿಸುತ್ತದೆ. ಈವರೆಗೆ 4,089 ಸಿಬ್ಬಂದಿ ಸಾವನ್ನಪ್ಪಿದ್ದು, ಇದರಲ್ಲಿ 174 ಮಂದಿ ಭಾರತೀಯರು ಪ್ರಾಣತ್ಯಾಗ ಮಾಡಿದ್ದಾರೆ ಎಂದು ಲೇಖಿ ಮಾಹಿತಿ ನೀಡಿದ್ದಾರೆ.
ಮೊದಲ ಮಹಿಳಾ ಶಾಂತಿಪಾಲನಾ ಪಡೆಯು ಭಾರತದಿಂದ ಬಂದಿದ್ದು, ಲೈಬೀರಿಯಾದಲ್ಲಿ ಕಾರ್ಯನಿರ್ವಹಿಸಿದೆ ಎಂಬುದಕ್ಕೆ ಭಾರತ ಹೆಮ್ಮೆ ಪಡುತ್ತದೆ ಎಂದ ಲೇಖಿ ಜಾಗತಿಕ ಶಾಂತಿ ಮತ್ತು ಭದ್ರತೆಗೆ ಮಹಿಳೆಯರು ನೀಡಬಹುದಾದ ಮಹತ್ವದ ಕೊಡುಗೆಯನ್ನು ವಿವರಿಸಿದರು.
ಇದನ್ನೂ ಓದಿ: ಪಾಕಿಸ್ತಾನದ ಮೇಲೆ ಅಮೆರಿಕ ನಿರ್ಬಂಧ ವಿಧಿಸಬೇಕು: ಅಮೆರಿಕ ಸಂಸದನ ಒತ್ತಾಯ