ಮುಂಬೈ: ಅಮೆರಿಕ ಕಂಪನಿಗಳು ಗುತ್ತಿಗೆ ಆಧಾರದಲ್ಲಿ ಹೊರದೇಶದ ಪ್ರತಿಭಾನ್ವಿತ ನೌಕರರನ್ನು ನೇಮಿಸಿಕೊಳ್ಳಲು ನೀಡುತ್ತಿರುವ ಹೆಚ್ 1-ಬಿ ವೀಸಾ ಮೇಲೆ ನಿರ್ಬಂಧ ಕಠಿಣಗೊಳಿಸಿರುವುದು ಭಾರತೀಯ ಐಟಿ ಕಂಪನಿಗಳಿಗೆ ಇದೀಗ ನುಂಗಲಾರದ ತುಪ್ಪವಾಗಿದೆ.
ತನ್ನ ದೇಶದ ಪ್ರಜೆಗಳಿಗೆ ಹೆಚ್ಚು ಉದ್ಯೋಗ ಸಿಗಬೇಕೆಂಬುದು ಅಮೆರಿಕದ ಟ್ರಂಪ್ ಆಡಳಿತದ ಒತ್ತಾಸೆಯಾಗಿದೆ. ಆದರೆ, ಅಮೆರಿಕ ನಿಯಮ ಬಿಗಿಗೊಳಿಸಿದ್ದು, ಭಾರತೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಅದೇ ದೇಶದ ಸ್ಥಳೀಯ ಜನರಿಗೆ ಉದ್ಯೋಗ ನೀಡಬೇಕಾದ ಅನಿವಾರ್ಯತೆ ಎದುರಿಸುತ್ತಿವೆ. ಇದರಿಂದ ಭಾರತೀಯ ಕಂಪನಿಗಳಿಗೆ ಹಣಕಾಸು ಹೊರೆಯಾಗುತ್ತಿದೆ. ಮತ್ತೊಂದು ಲಕ್ಷಾಂತರ ಭಾರತೀಯ ಎಂಜಿನಿಯರುಗಳ ಕನಸಿಗೂ ತಣ್ಣೀರೆರಚುತ್ತಿದೆ. ಈ ಅಂಶ ಕೇರ್ ರೇಟಿಂಗ್ ಏಜೆನ್ಸಿ ನಡೆಸಿದ ವಿಸ್ತೃತ ಸರ್ವೆಯಲ್ಲಿ ತಿಳಿದು ಬಂದಿದೆ.
2017-18 ರಲ್ಲಿ, ದೇಶದ ಎರಡನೇ ಅತೀ ದೊಡ್ಡ ಐಟಿ ಕಂಪನಿ ಇನ್ಫೋಸಿಸ್‌ಗೆ 2,122 ಉದ್ಯೋಗಿಗಳಿಗೆ ವೀಸಾ ನೀಡಲು ಅಮೆರಿಕ ನಿರಾಕರಿಸಿದೆ. ಇದೇ ರೀತಿ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಂಸ್ಥೆಯ 1,896 ವೀಸಾ ಅರ್ಜಿ ನಿರಾಕರಣೆಯಾಗಿದೆ. ಅಮೆರಿಕಾದ ರಕ್ಷಣಾತ್ಮಕ ನಡೆ ಭಾರತೀಯ ಐಟಿ ಕಂಪನಿಗಳ ಮೇಲೆ ಸಹಜವಾಗಿಯೇ ಕೆಟ್ಟ ಪರಿಣಾಮ ಬೀರುತ್ತಿದೆ.
ಹೀಗೆ ಅಮೆರಿಕ ವೀಸಾ ನಿರಾಕರಣೆಯಾದ ಐಟಿ ಕಂಪನಿಗಳ ಪಟ್ಟಿಯಲ್ಲಿ ಅದೇ ದೇಶ ಐಟಿ ಕಂಪನಿ ಕಾಗ್ನಿಜೆಂಟ್ ಮೊದಲ ಸಾಲಿನಲ್ಲಿದೆ. ಕಳೆದ ವರ್ಷ ಕಾಗ್ನಿಜೆಂಟ್ ಕಂಪನಿಯ ಶೇ 32 ವೀಸಾ ಅರ್ಜಿಯನ್ನು ಅಮೆರಿಕ ತಡೆಹಿಡಿದಿದೆ. ಇದರಲ್ಲಿ ಭಾರತೀಯ ಕಂಪನಿಗಳಾ ಇನ್ಫೋಸಿಸ್ ಹಾಗು ಟಿಸಿಎಸ್ ಪಾಲು ಕ್ರಮವಾಗಿ ಶೇ 26 ಮತ್ತು ಶೇ 18 ಆಗಿದೆ.
ಹೆಚ್ 1-ಬಿ ವೀಸಾ ನೀಡಿಕೆ ಪ್ರಮಾಣಕ್ಕೆ ಅಮೆರಿಕ ಕತ್ತರಿ ಹಾಕಿರುವ ಈ ಕಂಪನಿಗಳು ಅಮೆರಿಕದ ನೌಕರರಿಗೆ ಹೆಚ್ಚು ಉದ್ಯೋಗ ನೀಡಬೇಕಿದ್ದು, ಹಣಕಾಸು ಹೊರೆ ಎದುರಿಸುತ್ತಿವೆ. ಅಷ್ಟೇ ಅಲ್ಲ, ಈ ಕಂಪನಿಗಳ ಲಾಭಾಂಶದ ಮೊತ್ತಕ್ಕೂ ಕತ್ತರಿ ಬೀಳುತ್ತಿದೆ. ವರದಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಶೇ 21 ರಷ್ಟು ಹೆಚ್-1ಬಿ ವೀಸಾ ಅನುಮೋದನೆಯನ್ನು ಅಮೆರಿಕ ಕಡಿತಗೊಳಿಸಿದೆ.