ಹೈದರಾಬಾದ್: ಇಡೀ ವಿಶ್ವವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಮಹಾಮಾರಿ ಕೋವಿಡ್ ತನ್ನ ಅಟ್ಟಹಾಸವನ್ನು ಮುಂದುವರಿಸುತ್ತಲೇ ಇದ್ದು, ವಿಶ್ವದಾದ್ಯಂತ ಈವರೆಗೆ 3,17,87,504 ಮಂದಿ ಸೋಂಕಿತರಾಗಿದ್ದಾರೆ. ಇದರಲ್ಲಿ 9,75,541 ಮಂದಿ ಕೊರೊನಾದಿಂದ ಉಸಿರು ನಿಲ್ಲಿಸಿದ್ದಾರೆ.
ಈಗಾಗಲೇ 2,34,02,708 ಜನ ಸೋಂಕಿನಿಂದ ಗುಣಮುಖರಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ವಿಶ್ವದ ದೊಡ್ಡಣ್ಣ ಅಮೆರಿಕವು ಸೋಂಕಿತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಯುಎಸ್‌ನಲ್ಲಿ 70,97,937 ಮಂದಿ ಸೋಂಕಿತರಾಗಿದ್ದು, ಬರೋಬ್ಬರಿ 2,05,471 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಅಮೆರಿಕದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ಹಾಗೂ ಸೋಂಕಿನಿಂದ ಜನ ಮೃತಪಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 2 ಲಕ್ಷಕ್ಕೂ ಅಧಿಕ ಮಂದಿ ಕೋವಿಡ್-19ಗೆ ಬಲಿಯಾಗಿರುವುದು ನಾಚಿಕೆಯ ಸಂಗತಿ ಎಂದಿದ್ದು, ಮತ್ತೆ ಚೀನಾವನ್ನು ದೂರಿದ್ದಾರೆ.
ಸದ್ಯ ಭಾರತ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿ 56,46,010 ಮಂದಿ ಸೋಂಕಿತರಿದ್ದು, 90,021 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.