ವಾಷಿಂಗ್ಟನ್ (ಅಮೆರಿಕ): ಎಲ್ಲಾ ಅಮೆರಿಕನ್ನರು ಕಪ್ಪು ವರ್ಣೀಯ ಜಾರ್ಜ್ ಫ್ಲೋಯ್ಡ್ನ ಕ್ರೂರ ಸಾವಿನಿಂದ ಬೇಸತ್ತಿದ್ದಾರೆ. ಜಾರ್ಜ್ ಫ್ಲೋಯ್ಡ್ ಸಾವಿಗೆ ಹಾಗೂ ಆತನ ಕುಟುಂಬಕ್ಕೆ ನ್ಯಾಯ ಒದಗಿಸುವುದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭರವಸೆ ನೀಡಿದ್ದಾರೆ.
ನಾನು ಅಮೆರಿಕ ಅಧ್ಯಕ್ಷನಾಗಿರುವ ವೇಳೆ ಅಮೆರಿಕನ್ನರ ರಕ್ಷಣೆಯೇ ನನ್ನ ಉನ್ನತ ಕರ್ತವ್ಯ. ನಾನು ರಾಷ್ಟ್ರದ ಕಾನೂನನ್ನು ಎತ್ತಿಹಿಡಿಯುವುದಾಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ಅದನ್ನೇ ಈಗ ಮಾಡುತ್ತಿದ್ದೇನೆ ಎಂದಿರುವ ಟ್ರಂಪ್ ಪ್ರತಿಭಟನೆಯ ಹೆಸರಿನಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರುವ ಯಾವುದೇ ಕ್ರಮವನ್ನು ಕೂಡಾ ಸಹಿಸುವುದಿಲ್ಲ ಎಂದು ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಸದ್ಯಕ್ಕೆ ಅಮೆರಿಕ- ಆಫ್ರಿಕನ್ ಪ್ರಜೆ ಜಾರ್ಜ್ ಫ್ಲೋಯ್ಡ್ ಸಾವಿಗೆ ಪ್ರತಿಭಟನೆಗಳು ಬೃಹತ್ ಪ್ರಮಾಣದಲ್ಲಿ ನಡೆಯುತ್ತಿವೆ. ಇದನ್ನು ಹತ್ತಿಕ್ಕುವ ಸಲುವಾಗಿ ಅಮೆರಿಕದ ಸುಮಾರು 40 ನಗರದಲ್ಲಿ ಕರ್ಫ್ಯೂ ಘೋಷಣೆ ಮಾಡಲಾಗಿದೆ. ಅಲ್ಲಿನ ಪೊಲೀಸರ ಮೇಲೆ ಜನಾಂಗೀಯ ತಾರತಮ್ಯ ಆರೋಪ ಕೇಳಿಬರುತ್ತಿದ್ದು, ಕೆಲವೆಡೆ ನಡೆದ ಪ್ರತಿಭಟನೆಯಲ್ಲಿ ಹಿಂಸಾತ್ಮಕ ಕೃತ್ಯಗಳು ನಡೆದಿವೆ. ಇನ್ನೂ ಕೆಲವೆಡೆ ಪೊಲೀಸರು ಅಶ್ರುವಾಯು ಸಿಡಿಸಿ ಪ್ರತಿಭಟನೆಯನ್ನು ತಹಬದಿಗೆ ತಂದಿದ್ದಾರೆ.