ನ್ಯೂಯಾರ್ಕ್: ಆಕ್ಸಿಜನ್ನ ಭಾರೀ ಅಭಾವದೊಂದಿಗೆ ಕೋವಿಡ್ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಅನೇಕ ರಾಷ್ಟ್ರಗಳು ಸಹಾಯಹಸ್ತ ಚಾಚಿದ್ದು, ಇದೀಗ ಅಮೆರಿಕವು ಭಾರತಕ್ಕೆ ಆಮ್ಲಜನಕ ಸಾಂದ್ರಕಗಳನ್ನು ರವಾನಿಸಿದೆ.
ನ್ಯೂಯಾರ್ಕ್ನ ಜಾನ್ ಎಫ್. ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಐದು ಟನ್ (5,000 ಕೆಜಿ) ಆಮ್ಲಜನಕ ಸಾಂದ್ರಕಗಳನ್ನು ಏರ್ ಇಂಡಿಯಾ ವಿಮಾನ ಹೊತ್ತು ತರುತ್ತಿದ್ದು, ಇಂದು ಮಧ್ಯಾಹ್ನದ ವೇಳೆಗೆ ದೆಹಲಿ ತಲುಪಲಿದೆ ಎಂದು ಯುಎಸ್ನಲ್ಲಿರುವ ಭಾರತ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಭೂತಪೂರ್ವ ಕೋವಿಡ್-19 ಬಿಕ್ಕಟ್ಟನ್ನು ಎದುರಿಸುತ್ತಿರುವ ಭಾರತಕ್ಕೆ ಅಗತ್ಯ ಸಮಯದಲ್ಲಿ ಸಹಾಯ ಮಾಡಲು ಅಮೆರಿಕ ನಿರ್ಧರಿಸಿದೆ. ಸಾಂಕ್ರಾಮಿಕದ ಆರಂಭದಲ್ಲಿ ನಮ್ಮ ಆಸ್ಪತ್ರೆಗಳು ತೊಂದರೆಗೊಳಗಾಗಿದ್ದಾಗ ಭಾರತ ಸಹಾಯ ಮಾಡಿತ್ತು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದರು. ಅದರಂತೆ ಈಗ ಆಮ್ಲಜನಕ ಪೂರೈಸುತ್ತಿದ್ದಾರೆ. ಹಾಗೆಯೇ ಕೋವಿಶೀಲ್ಡ್ ಲಸಿಕೆ ತಯಾರಿಸಲು ಭಾರತಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನು ನೀಡುವುದಾಗಿ ಯುಎಸ್ ಘೋಷಿಸಿದೆ.
ಇದನ್ನೂ ಓದಿ: ಕೋವಿಡ್‌ಗೆ ನಲುಗಿದ ಭಾರತ: ಅಮೆರಿಕ, ಯುಕೆ, ಫ್ರಾನ್ಸ್ ಸಹಾಯದ ಭರವಸೆ
ಕೆಲ ದಿನಗಳಿಂದ ಭಾರತದಲ್ಲಿ ದಾಖಲೆಯ ಮೂರು ಲಕ್ಷ ಕೊರೊನಾ ಪ್ರಕರಣಗಳು ಪ್ರತಿನಿತ್ಯ ಪತ್ತೆಯಾಗುತ್ತಿದ್ದು, ಎರಡು ಸಾವಿರಕ್ಕೂ ಅಧಿಕ ಮಂದಿ ಬಲಿಯಾಗುತ್ತಿದ್ದಾರೆ. ಬೆಡ್, ಆಕ್ಸಿಜನ್ನಂತಹ ಕೊರತೆಯಿಂದಾಗಿ ದೇಶದ ವೈದ್ಯಕೀಯ ಕ್ಷೇತ್ರ ಬಹುದೊಡ್ಡ ಸವಾಲು ಎದುರಿಸುತ್ತಿದೆ.