ಬೊಗೊಟಾ (ಕೊಲಂಬಿಯಾ): ಪೂರ್ವ ರಾಜ್ಯವಾದ ಅರೌಕಾದಲ್ಲಿ ಬಂಡುಕೋರ ಗುಂಪುಗಳ ನಡುವಿನ ಘರ್ಷಣೆ ತೀವ್ರಗೊಂಡಿದ್ದು, ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ ಹಲವಾರು ಮಂದಿ ತಮ್ಮ ಮನೆಗಳನ್ನು ತೊರೆದು ಪಲಾಯನ ಮಾಡಿದ್ದಾರೆ ಎಂದು ಕೊಲಂಬಿಯಾದ ರಕ್ಷಣಾ ಸಚಿವರು ತಿಳಿಸಿದ್ದಾರೆ.
ಕೊಲಂಬಿಯಾ ಸರ್ಕಾರ ಕ್ರಾಂತಿಕಾರಿ ಸಶಸ್ತ್ರ ಪಡೆಗಳೊಂದಿಗೆ 2016ರಲ್ಲಿ ಶಾಂತಿ ಒಪ್ಪಂದ ಮಾಡಿಕೊಂಡ ನಂತರ ದೇಶದಲ್ಲಿ ಬಹುಪಾಲು ನರಹತ್ಯೆ ಪ್ರಕರಣಗಳು ಕಡಿಮೆಯಾಗಿದ್ದವು. ಆದರೆ, ಈಗ ಸಣ್ಣ ಬಂಡುಕೋರ ಗುಂಪುಗಳು ಮತ್ತು ಮಾದಕವಸ್ತು ಕಳ್ಳಸಾಗಣೆ ಸಂಘಟನೆಗಳ ನಡುವಣ ಘರ್ಷಣೆ ತೀವ್ರಗೊಂಡಿದೆ. ಕಳ್ಳಸಾಗಣೆ , ಅಕ್ರಮ ಗಣಿಗಾರಿಕೆ ಮತ್ತು ಇತರ ಆಸ್ತಿಗಳ ಮೇಲೆ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿರುವುದರಿಂದ ದೇಶದ ಗ್ರಾಮೀಣ ಭಾಗದಲ್ಲಿ ಹಿಂಸಾಚಾರ ಹೆಚ್ಚಾಗುತ್ತಿದೆ ಎಂದು ತಿಳಿದು ಬಂದಿದೆ.
ಡ್ರಗ್ಸ್ ವ್ಯಾಪಾರದ ಮೇಲಿನ ಪ್ರಾಬಲ್ಯಕ್ಕಾಗಿ ಹೋರಾಟ:
'ಅರೌಕಾ' ಕೊಲಂಬಿಯಾದ ಕೆಲವು ದೊಡ್ಡ ತೈಲ ಬಾವಿಗಳಿಗೆ ನೆಲೆಯಾಗಿದೆ. ತೈಲ ಕದಿಯುವ ಬಂಡುಕೋರ ಗುಂಪುಗಳು ನಿರಂತರವಾಗಿ ದಾಳಿ ಮಾಡುತ್ತಿವೆ. ರಾಜ್ಯ ಗಡಿ ವೆನೆಜುವೆಲಾ ಜನರು ಮತ್ತು ಮಾದಕವಸ್ತು ಕಳ್ಳಸಾಗಣೆ ಗುಂಪುಗಳು ದಶಕಗಳಿಂದ ಅದರ ಕಳ್ಳಸಾಗಣೆ ಮಾರ್ಗಗಳ ಬಗ್ಗೆ ಹೋರಾಡುತ್ತಿವೆ.
ಕೊಲಂಬಿಯಾದ ಸೇನೆಯು ಶಾಂತಿ ಒಪ್ಪಂದಕ್ಕೆ ಸೇರಲು ನಿರಾಕರಿಸಿದ ನ್ಯಾಷನಲ್ ಲಿಬರೇಶನ್ ಆರ್ಮಿ ಗೆರಿಲ್ಲಾ (ELN) ಗುಂಪು ಮತ್ತು FARC ನ ಮಾಜಿ ಸದಸ್ಯರ ನಡುವಿನ ಹೋರಾಟದಿಂದ ಇತ್ತೀಚಿನ ಹಿಂಸಾಚಾರ ಸಂಭವಿಸಿದೆ ಎಂದು ಹೇಳಿದೆ. ಎರಡೂ ಗುಂಪುಗಳು ಪ್ರಸ್ತುತ ಪ್ರದೇಶದ ಡ್ರಗ್ಸ್ ವ್ಯಾಪಾರದ ಮೇಲೆ ಪ್ರಾಬಲ್ಯಕ್ಕಾಗಿ ಹೋರಾಡುತ್ತಿವೆ ಎಂದು ಸೇನೆ ಹೇಳಿದೆ.
ಕಳೆದ ಒಂದು ವಾರದಲ್ಲಿ 50 ಜನರು ನಾಪತ್ತೆಯಾಗಿದ್ದು, 27 ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕೊಲಂಬಿಯಾದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯು ತನ್ನ ಟ್ವಿಟರ್ನಲ್ಲಿ ತಿಳಿಸಿದೆ. ಜತೆಗೆ ಅಂತಾರಾಷ್ಟ್ರೀಯ ಮಾನವೀಯ ಕಾನೂನನ್ನು ಗೌರವಿಸುವಂತೆ, ಈ ಪ್ರದೇಶದಲ್ಲಿ ಸಶಸ್ತ್ರ ಗುಂಪುಗಳಿಗೆ ಕರೆ ನೀಡಿದೆ.
ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಈ ಬಂಡುಕೋರ ಗುಂಪುಗಳಿಗೆ ಆಶ್ರಯ ನೀಡುತ್ತಿದ್ದಾರೆ ಎಂದು ಕೊಲಂಬಿಯಾ ಅಧ್ಯಕ್ಷ ಇವಾನ್ ಡ್ಯೂಕ್ ಆರೋಪಿಸಿದ್ದಾರೆ. ಅಲ್ಲದೇ ಸಶಸ್ತ್ರ ಗುಂಪುಗಳನ್ನು ಪ್ರತಿಬಂಧಿಸಲು ವೆನೆಜುವೆಲಾದ ಗಡಿಪ್ರದೇಶಕ್ಕೆ ಹೆಚ್ಚಿನ ಸೇನಾ ಪಡೆಗಳನ್ನು ಕಳುಹಿಸುವುದಾಗಿ ಹೇಳಿದ್ದಾರೆ.