ಸ್ಯಾನ್ ಫ್ರಾನ್ಸಿಸ್ಕೋ(ಅಮೆರಿಕ): ಫೇಸ್‌ಬುಕ್ ಈಗ ತನ್ನ ಅಧೀನದಲ್ಲಿ ಹಲವಾರು ಜಾಲತಾಣಗಳನ್ನು ಹೊಂದಿದ್ದು, ಎಲ್ಲವನ್ನೂ ಒಂದೇ ಬ್ರಾಂಡ್ನಡಿ ತಂದು ಹೊಸ ಹೆಸರಿಡಲಾಗುತ್ತಿದೆ ಎಂದು ಫೇಸ್ಬುಕ್ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಗುರುವಾರ ಘೋಷಿಸಿದ್ದಾರೆ.
ಈಗಾಗಲೇ ಫೇಸ್‌ಬುಕ್ ಮತ್ತು ಅದರ ಅಧೀನದ ಜಾಲತಾಣಗಳು ಕೆಲವೊಂದು ಸರ್ಕಾರದ ನಿಯಮಗಳು, ಮಾರುಕಟ್ಟೆ ವಿಸ್ತಾರ, ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ನಿಂದನೆಗಳು, ಕಂಪನಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಕಾರಣಕ್ಕಾಗಿ ಸಾಕಷ್ಟು ಹೋರಾಟವನ್ನು ನಡೆಸುತ್ತಿದೆ. ಈ ಬೆನ್ನಲ್ಲೇ ಮೆಟಾ (META) ಎಂದು ಹೆಸರಿಡಲು ಫೇಸ್ಬುಕ್ ನಿರ್ಧಾರ ಮಾಡಿದೆ.
ಫೇಸ್ಬುಕ್ನ ಲೈವ್-ಸ್ಟ್ರೀಮ್ಡ್ ವರ್ಚುವಲ್ ಮತ್ತು ರಿಯಾಲಿಟಿ ಕಾನ್ಫರೆನ್ಸ್‌ನಲ್ಲಿ ಮಾರ್ಕ್ ಜುಕರ್‌ಬರ್ಗ್ ಮಾತನಾಡುತ್ತಾ ಮೆಟಾ ಎಂಬ ಹೆಸರನ್ನು ಇಡುವುದಾಗಿ ಘೋಷಣೆ ಮಾಡಿದ್ದಾರೆ. 'ಮೆಟಾವರ್ಸ್' ಅನ್ನು ಸಾಧಿಸುವ ಸಲುವಾಗಿ ಈ ಹೆಸರು ಇಟ್ಟಿರುವುದಾಗಿ ಜುಕರ್‌ಬರ್ಗ್ ಸ್ಪಷ್ಟನೆ ನೀಡಿದ್ದಾರೆ.
ಫೇಸ್ಬುಕ್, ಇನ್ಸ್ಟಾಗ್ರಾಮ್, ಮೆಸೆಂಜರ್, ಒಕುಲಸ್ ಮುಂತಾದ ಕಂಪನಿಗಳು ಮಾರ್ಕ್ ಜುಕರ್‌ಬರ್ಗ್ ಒಡೆತನದಲ್ಲಿದ್ದು, ಇವೆಲ್ಲವನ್ನೂ ಒಟ್ಟಿಗೆ ತರಲಾಗುತ್ತದೆ. ಆದರೆ ಉದ್ಯೋಗ ಶ್ರೇಣಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮಾರ್ಕ್ ಘೋಷಿಸಿದ್ದಾರೆ.
ಏನಿದು ಮೆಟಾವರ್ಸ್?
ಮೆಟಾವರ್ಸ್ ಒಂದು ವಿಶಾಲವಾದ ಅರ್ಥವನ್ನು ನೀಡುವ ಪದವಾಗಿದೆ. ಸಾಮಾಜಿಕ ಜಾಲತಾಣಗಳ ವಿಚಾರಕ್ಕೆ ಬರುವುದಾದರೆ ಇಂಟರ್ನೆಟ್ ಮೂಲಕ ಒಬ್ಬ ವ್ಯಕ್ತಿ ವರ್ಚುವಲ್ ಮಾದರಿಯಲ್ಲಿ ( ಸಾಮಾನ್ಯವಾಗಿ ವಿಡಿಯೋ ಕಾನ್ಫರೆನ್ಸ್ ಮಾದರಿಯಲ್ಲಿ ಅಥವಾ ಬೇರೆ ಮಾದರಿಗಳಲ್ಲಿ) ಜಗತ್ತಿನೊಂದಿಗೆ ಸಂಪರ್ಕ ಸಾಧಿಸುವುದಾಗಿದೆ.ಇದನ್ನು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಸಾಧಿಸಲು ಫೇಸ್ಬುಕ್ ನಿರ್ಧಾರ ಮಾಡಿದೆ ಎಂದು ಮಾರ್ಕ್ ಜುಕರ್‌ಬರ್ಗ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: 'ಕಡಿಮೆ ಆಹಾರ ತಿನ್ನಿ..' ಉತ್ತರ ಕೊರಿಯಾ ಜನರಿಗೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮನವಿ