ವಾಷಿಂಗ್ಟನ್(ಅಮೆರಿಕಾ): ಕೊರೊನಾ ವೈರಸ್ ತಡೆಗಟ್ಟುವಿಕೆಯ ಪ್ರಯತ್ನದ ಸಲುವಾಗಿ ಮಲೇರಿಯಾಕ್ಕೆ ಬಳಸಲಾಗುವ ಔಷಧವನ್ನು ಎರಡು ವಾರಗಳ ಕಾಲ ಅಧ್ಯಕ್ಷ ಟ್ರಂಪ್ ಸೇವಿಸಿದ್ದು, ಇದರ ಸಂಭಾವ್ಯ ಅಡ್ಡ ಪರಿಣಾಮಗಳ ಬಗ್ಗೆ ತಿಳಿಯಲು ಶ್ವೇತಭವನದ ವೈದ್ಯಕೀಯ ತಂಡ ಟ್ರಂಪ್ ಬಗ್ಗೆ ತೀವ್ರ ಗಮನ ಹರಿಸಿತ್ತು ಎಂದು ಬುಧವಾರ ವರದಿಯಾಗಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ವಾರಗಳ ಕಾಲ ಮಲೇರಿಯಾ ರೋಗಕ್ಕೆ ನೀಡಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಸೇವಿಸಿದ್ದು, ಟ್ರಂಪ್ ಆರೋಗ್ಯ ಸ್ಥಿತಿಯ ಬಗ್ಗೆ ಡಾ. ಸೀನ್ ಕೋನ್ಲೆ ವರದಿ ಸಲ್ಲಿಸಿದ್ದಾರೆ.
ಈ ವರದಿಯಲ್ಲಿ ಡಾ.ಸೀನ್ ಕೋನ್ಲೆ ಟ್ರಂಪ್ ಆರೋಗ್ಯದ ಬಗ್ಗೆ ವಿವರಣೆ ನೀಡಿದ್ದು, ಈ ಹಿಂದಿನ ಆರೋಗ್ಯ ಸ್ಥಿತಿಗತಿಗೂ, ಪ್ರಸ್ತುತವಾಗಿಯು ಸ್ವಲ್ಪ ಬದಲಾವಣೆಯಾಗಿದೆ. ಈ ಮಾತ್ರೆಯಿಂದಾಗಿ ಅವರ ದೇಹದಲ್ಲಿ ನಕಾರಾತ್ಮಕ ಹಾಗೂ ಸಕಾರಾತ್ಮಕವಾಗಿ ಪರಿಣಾಮ ಬೀರಿದೆ ಎಂದು ಉಲ್ಲೇಖಿಸಿದ್ದಾರೆ.
ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಬುಧವಾರ ಪ್ರಕಟಿಸಿದ ಫಲಿತಾಂಶಗಳ ಪ್ರಕಾರ, ಕೊರೊನಾ ವೈರಸ್ನಿಂದ ಉಂಟಾಗುವ ಅನಾರೋಗ್ಯವನ್ನು ತಡೆಗಟ್ಟುವಲ್ಲಿ ಪ್ಲೇಸಿಬೊ ಮಾತ್ರೆಗಳಿಗಿಂತ ಹೈಡ್ರಾಕ್ಸಿಕ್ಲೋರೋಕ್ವಿನ್ ಉತ್ತಮವಾಗಿಲ್ಲ ಎಂದಿದ್ದಾರೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದಿಂದಾಗಿ ದೇಹದ ಮೇಲೆ ಗಂಭೀರ ಹಾನಿಯಾಗುವುದಿಲ್ಲ ಆದರೆ, ಶೇ.40% ರಷ್ಟು ಅಡ್ಡಪರಿಣಾಮಗಳನ್ನು ಬೀರಲಿದೆ, ಹೆಚ್ಚಾಗಿ ಹೊಟ್ಟೆಯ ತೊಂದರೆಗಳು ಉದ್ಬವವಾಗಲಿದೆ ಎಂದು ಪ್ರಕಟಿಸಿದೆ.
ಅಧ್ಯಕ್ಷ ಟ್ರಂಪ್ರನ್ನು ಈ ಹಿಂದೆ ಎರಡು ಬಾರಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿತ್ತು. ಮೊದಲು 2019 ನವೆಂಬರ್‌ನಲ್ಲಿ ಮತ್ತು ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ. ಈ ತಪಾಸಣೆಯಲ್ಲಿ ಟ್ರಂಪ್ ಎದೆ ಬಡಿತ ನಿಮಿಷಕ್ಕೆ 63 ಬಾರಿಯಾಗಿತ್ತು ಎಂದ ಡಾ.ಸೀನ್ ಕೋನ್ಲೆ, ವಯಸ್ಕರಿಗೆ ಸಾಮಾನ್ಯ ವಿಶ್ರಾಂತಿ ಹೃದಯ ಬಡಿತ ನಿಮಿಷಕ್ಕೆ 60 ರಿಂದ 100 ಬೀಟ್ಸ್ ಆಗಿದ್ದು, ಇದು ಉತ್ತಮ ಹೃದಯ ರಕ್ತನಾಳದ ಫಿಟ್ನೆಸ್ ಅನ್ನು ಸೂಚಿಸುತ್ತದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.