ನವದೆಹಲಿ: ಇಸ್ಲಾಮಿಕ್ ಸಹಕಾರ ಸಂಘಟನೆಯ(ಒಐಸಿ) ಆದೇಶದ ಮೇರೆಗೆ ಪಾಕಿಸ್ತಾನ ಪ್ರಾಯೋಜಿತ ನಿರ್ಣಯವನ್ನು ಯುಎನ್‌ಜಿಎ ಅಂಗೀಕರಿಸಿದ್ದು, ಇತರ ಧರ್ಮಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯವನ್ನೂ ಗುರುತಿಸುವಂತೆ ವಿಶ್ವ ಸಂಸ್ಥೆಯನ್ನ ಭಾರತ ಒತ್ತಾಯಿಸಿದೆ.
ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ, ಒಐಸಿ ಪ್ರಾಯೋಜಿತ ಮತದಾನಕ್ಕೂ ಮೊದಲು 'ಇಸ್ಲಾಮೋಫೋಬಿಯಾದ ಅಂತಾರಾಷ್ಟ್ರೀಯ ದಿನದಂದು ವಿಶ್ವಸಂಸ್ಥೆಯಲ್ಲಿ ಮಾತನಾಡಿ, ಬಹುತ್ವವು ನಮ್ಮ ಅಸ್ತಿತ್ವದ ತಿರುಳಾಗಿದೆ ಎಂದು ಭಾರತವು ಹೆಮ್ಮೆಪಡುತ್ತವೆ. ಎಲ್ಲಾ ಧರ್ಮಗಳು, ನಂಬಿಕೆ ಹಾಗೂ ಸಮಾನ ರಕ್ಷಣೆಯನ್ನು ನಾವು ದೃಢವಾಗಿ ನಂಬುತ್ತೇವೆ ಎಂದು ಹೇಳಿದ್ದಾರೆ.
ಪ್ರಪಂಚದಾದ್ಯಂತ ಧಾರ್ಮಿಕ ಅಸಹಿಷ್ಣುತೆ ಪ್ರಚಲಿತದಲ್ಲಿರುವಾಗ ನಿರ್ಣಯವು ಇಸ್ಲಾಂ ಧರ್ಮವನ್ನು ಮಾತ್ರ ಪ್ರತ್ಯೇಕಿಸುತ್ತದೆ. ಇತರರನ್ನು ಹೊರಗಿಡುತ್ತದೆ ಎಂದು ಭಾರತವಲ್ಲದೇ, ಫ್ರಾನ್ಸ್ ಮತ್ತು ಯುರೋಪಿಯನ್ ಒಕ್ಕೂಟಗಳು ಈ ನಿರ್ಣಯದ ಬಗ್ಗೆ ವಿರೋಧ ವ್ಯಕ್ತಪಡಿಸಿವೆ ಎಂದು ಹೇಳಿದರು.
ಯಾವುದೇ ಧರ್ಮವನ್ನು ಗುರಿಯಾಗಿಸುವ ಎಲ್ಲ ಕೃತ್ಯಗಳನ್ನು ಖಂಡಿಸಿದ ಭಾರತೀಯ ರಾಯಭಾರಿ, ನಾವು ಯೆಹೂದ್ಯ ವಿರೋಧಿ, ಕ್ರಿಶ್ಚಿಯನ್ ಫೋಬಿಯಾ ಅಥವಾ ಇಸ್ಲಾಮೋಫೋಬಿಯಾದಿಂದ ಪ್ರೇರೇಪಿಸಲ್ಪಟ್ಟ ಎಲ್ಲ ಕೃತ್ಯಗಳನ್ನು ಖಂಡಿಸುತ್ತೇವೆ. ಆದರೂ ಅಂತಹ ಫೋಬಿಯಾಗಳು ಅಬ್ರಹಾಮಿಕ್ ಧರ್ಮಗಳಿಗೆ ಮಾತ್ರ ಸೀಮಿತವಾಗಿಲ್ಲ. ವಾಸ್ತವವಾಗಿ, ಅಂತಹ ಧಾರ್ಮಿಕ ಫೋಬಿಯಾಗಳು ಅಬ್ರಹಾಮಿಕ್ ಅಲ್ಲದ ಧರ್ಮಗಳ ಅನುಯಾಯಿಗಳ ಮೇಲೂ ಪರಿಣಾಮ ಬೀರಿವೆ ಎಂಬುದಕ್ಕೆ ಸ್ಪಷ್ಟ ಪುರಾವೆಗಳಿವೆ.
ದುರಾದೃಷ್ಟಕರ ಸಂಗತಿಯೆಂದರೆ ಬಹುತ್ವ ಎಂಬ ಪದವು ನಿರ್ಣಯದಲ್ಲಿ ಯಾವುದೇ ಉಲ್ಲೇಖವನ್ನು ಕಾಣುವುದಿಲ್ಲ. ಪ್ರಾಯೋಜಕರು ನಮ್ಮ ತಿದ್ದುಪಡಿಗಳನ್ನು ತೆಗೆದುಕೊಳ್ಳಲು ಸೂಕ್ತವೆಂದು ಕಂಡುಬಂದಿಲ್ಲ. ಅವರಿಗೆ ತಿಳಿದಿರುವ ಕಾರಣಗಳಿಗಾಗಿ ಬಹುತ್ವ ಪದವನ್ನು ಪಠ್ಯದಲ್ಲಿ ಸೇರಿಸಬೇಕಿದೆ ಎಂದಿದ್ದಾರೆ. ಪಾಕ್ ಪ್ರಯೋಜಿತ ನಿರ್ಣಯವನ್ನು ಒಐಸಿಯ 57 ಸದಸ್ಯರು, ಚೀನಾ ಮತ್ತು ರಷ್ಯಾ ಸೇರಿದಂತೆ ಎಂಟು ಇತರ ದೇಶಗಳು ಬೆಂಬಲಿಸಿವೆ.
ಮುಸ್ಲಿಮರ ವಿರುದ್ಧದ ತಾರತಮ್ಯ ಮೊಟಕುಗೊಳಿಸುವ ನಿರ್ಣಯ - ಪಾಕ್
ಇಸ್ಲಾಮೋಫೋಬಿಯಾ, ಧಾರ್ಮಿಕ ಚಿಹ್ನೆಗಳು ಮತ್ತು ಆಚರಣೆಗಳಿಗೆ ಗೌರವ ಮತ್ತು ಮುಸ್ಲಿಮರ ವಿರುದ್ಧ ವ್ಯವಸ್ಥಿತ ದ್ವೇಷ ಭಾಷಣ ಮತ್ತು ತಾರತಮ್ಯ ಮೊಟಕುಗೊಳಿಸುವ ಮಹತ್ವದ ನಿರ್ಣಯವನ್ನು ವಿಶ್ವಸಂಸ್ಥೆ ಅಂಗೀಕರಿಸಿದೆ. ಒಐಸಿ ಪರವಾಗಿ ಪಾಕ್ ಪರಿಚಯಿಸಿದ ನಿರ್ಣಯದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವುದು ಮುಂದಿನ ಸವಾಲು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.
ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿಗೆ ಬೀಳುತ್ತಾ ನಿರ್ಬಂಧ?: ವಿಶ್ವಸಂಸ್ಥೆಯಲ್ಲಿ ಏನೆಲ್ಲಾ ಬೆಳವಣಿಗೆಗಳು ನಡೆದವು ಗೊತ್ತಾ?